ಯಲ್ಲಾಪುರ, ; ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಯಲ್ಲಾಪುರ ಪಟ್ಟಣದ ರವೀಂದ್ರನಗರದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆಗಳು ಬಿದ್ದು ನಾಲ್ಕು ಕಂಬಗಳು ಧರೆಗೆ ಉರುಳಿವೆ. ಈ ಘಟನೆಯಿಂದ ಪಟ್ಟಣದಲ್ಲಿ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಯಲ್ಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣ ವ್ಯಾಪ್ತಿಯ ಮುಂಡಗೋಡ ರಸ್ತೆ ಲಿಂಗನಕೊಪ್ಪ ಶಾಲೆಯ ಸುತ್ತಮುತ್ತಲಿನ ಮನೆಗಳಿಗೆ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಜನರು ಸಹಜ ಜೀವನ ನಡೆಸಲು ಬಿಕ್ಕಟ್ಟು ಎದುರಿಸುತ್ತಿದ್ದಾರೆ.
ಲಿಂಗನಕೊಪ್ಪ ಶಾಲೆಯ ಪಕ್ಕದ ನಿವಾಸಿಗಳ ಮನೆಗೆ ಅತಿಯಾದ ವಿದ್ಯುತ್ ಪ್ರವಹಿಸಿ ಹಲವಾರು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳು ಸುಟ್ಟು ಹೋಗಿವೆ. ಅದೇ ರೀತಿ, ಗ್ರಾಮೀಣ ಭಾಗದಲ್ಲಿಯೂ ಕೂಡ ಕೆಲವು ಮನೆಗಳಿಗೆ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.
ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರವಾಗಿ ವಿದ್ಯುತ್ ಸಂಪರ್ಕ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಒಂದು ಕಡೆ ಸರಿಯಾದ ವಿದ್ಯುತ್ ಸಂಪರ್ಕ ನೀಡಲು ಪ್ರಯತ್ನಿಸಿದಾಗ, ಇನ್ನೊಂದು ಕಡೆ ಮರ ಬಿದ್ದು ಅಥವಾ ಇತರ ಕಾರಣಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಇಂತಹ ಪ್ರಾಕೃತಿಕ ವಿಕೋಪಗಳ ನಡುವೆಯೂ, ರಾತ್ರಿ ಹಗಲು ಎನ್ನದೆ ಸೇವೆ ಸಲ್ಲಿಸುತ್ತಿರುವ ಹೆಸ್ಕಾಂ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಶ್ಲಾಘನೀಯವಾಗಿದೆ. ಹಲವಾರು ಅಪಾಯಗಳನ್ನು ಎದುರಿಸುತ್ತಾ ನಾಗರಿಕರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅವರು ಮಾಡುವ ಪ್ರಯತ್ನವನ್ನು ಜನರು ಮೆಚ್ಚುತ್ತಿದ್ದಾರೆ.