ಯಲ್ಲಾಪುರ : ಕರ್ಬಲಾ ಕದನದಲ್ಲಿ ಚಿತ್ರಹಿಂಸೆಗೆ ಒಳಗಾಗಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಮೊಮ್ಮಗ ಹಸನ್ ಹುಸೇನ್ ಅವರ ಅಮರತ್ವವನ್ನು ಸ್ಮರಿಸುವ ದಿನವನ್ನು ಮೊಹರಂ ಎಂದು ಯಲ್ಲಾಪುರ ಪಟ್ಟಣದದಲ್ಲಿ ಮುಸ್ಲಿಂ ಸಮಾಜದವರು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಸಂಭ್ರಮ-ದುಃಖ, ಸೋಲು-ಗೆಲುವಿನ, ನೋವು-ನಲಿವಿನ ಮಿಳಿತವೇ ಮೊಹರಂ. ಕಳೆದ 9 ದಿನಗಳಿಂದ ಪಟ್ಟಣದ 8 ಕಡೆಗಳಲ್ಲಿ ಮೊಹರಂ ಪಂಜಾ ಸ್ಥಾಪಿಸಲಾಗಿತ್ತು ನಾಯ್ಕನಕೇರಿಯಲ್ಲಿ ಬಾರಾ ಇಮಾಮ್, ತಟಗಾರ್ ಕ್ರಾಸ್ ಬಳಿ ರಾಜೇಬಕ್ಷೇ, ನೂತನನಗರ ಜಡ್ಡಿಯಲ್ಲಿ ಇಮಾಂಖಾಸಿಂ, ಮಚ್ಚಿಗಲ್ಲಿಯಲ್ಲಿ ಹಸನ್-ಹುಸೇನ್, ವಲೀಶಾ ಗಲ್ಲಿಯಲ್ಲಿ ಮೌಲಾಲಿ ಹಾಗೂ ದರ್ಗಾ ಗಲ್ಲಿಯಲ್ಲಿ ಬಿಬಿ ಫಾತೀಮಾ ಪಂಜಾ ಹಾಗೂ ಡೋರಿಗಳನ್ನು ಸ್ಥಾಪಿಸಲಾಗಿತ್ತು.
ಬುಧವಾರ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ದರ್ಗಾಗಲ್ಲಿ ಬಿಬಿ ಫಾತಿಮಾ ಪಂಜಾದ ಕಡೆಗರ ಉಳಿದ 7 ಪಂಜಾ ಡೋರಿಗಳು ಬಂದವು. ಅಲ್ಲಿಂದ ಎಲ್ಲ ಡೋರಿ, ಪಂಚಾಗಳು ಮೆರವಣಿಗೆಯಲ್ಲಿ ತೆರಳಿ ಧಾರ್ಮಿಕ ಗೀತೆ, ಮುಂತಾದವುಗಳೊಂದಿಗೆ ದೇವಿ ಟೆಂಪಲ್ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ಜೋಡಕೆರೆಗೆ ತೆರಳಿ ಅಲ್ಲಿ ಮೊಹರಂ ಹಬ್ಬ ಕೊನೆಗೊಂಡಿತು.
ಮೊಹರಂ ಕಮಿಟಿ ಅಧ್ಯಕ್ಷ ಮೂದೀನ್ ಶೇಖ, ಉಪಾಧ್ಯಕ್ಷ ಅಜಗರ್, ಕಾರ್ಯದರ್ಶಿ ಜಕ್ರೀಯಾ ಮುಲ್ಲಾ ಮುಂತಾದವರು ಮೋಹರಂ ಆಚರಣೆ ಶಾಂತಿಯುತವಾಗಿ ನಡೆಯುವಂತೆ ಮುಂದಾಳತ್ವ ವಹಿಸಿದ್ದರು.
ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐಗಳಾದ ಸಿದ್ದಪ್ಪ ಗುಡಿ, ನಿರಂಜನ ಹೆಗಡೆ, ನಸ್ರೀನ್‌ತಾಜ್ ಚಟ್ಟರಗಿ, ಶ್ಯಾಮ ಪಾವಸ್ಕರ್ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಏರ್ಪಡಿಸಿದ್ದರು.