ಯಲ್ಲಾಪುರ: ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸ ಚೈತನ್ಯ ತುಂಬಿಸಿಕೊಳ್ಳುತ್ತಿದೆ. ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ.ಆರ್ ಡಿ ಜನಾರ್ದನ್ ಅವರು ಕಾಲೇಜಿನಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ.
ಹಿಂದೆ ಒಂದೇ ಕೋಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲರ ಕೊಠಡಿ ಮತ್ತು ಸ್ಟಾಫ್ ರೂಮ್ ಅನ್ನು ಪ್ರತ್ಯೇಕಿಸಿ, ಸ್ವಚ್ಛ ಮತ್ತು ಸುಸಜ್ಜಿತ ಸ್ಥಳಗಳನ್ನು ನಿರ್ಮಿಸಲಾಗಿದೆ. ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (NAAC) ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ಅಂತಿಮಹಂತದಲ್ಲಿದೆ.
ಕಳೆದ ಎರಡು ದಿನಗಳಿಂದ ಕಾಲೇಜಿನ ಕಟ್ಟಡದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಣ್ಣ ಹಚ್ಚುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಓದಿರುವ ಹಾಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಣ್ಣ ಬಣ್ಣ ಹೊಸತನವನ್ನು ತಂದಿದೆ. ವಿದ್ಯಾರ್ಥಿಗಳು ಕೂಡ ಈ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಯಲ್ಲಾಪುರ ಕಾಲೇಜಿಗೆ ಇನ್ನಷ್ಟು ಅಮೂಲಾಗ್ರ ಬದಲಾವಣೆಗಳನ್ನು ತರಲಾಗುವುದಾಗಿ ಭರವಸೆ ನೀಡಿದ್ದಾರೆ. ಶಾಸಕರ ಇಚ್ಚೆಗೆ ಅನುಸಾರವಾಗಿ ಪ್ರಾಂಶುಪಾಲರೂ ಕೂಡ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಈ ಬದಲಾವಣೆಗಳ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಈಎಲ್ಲ ಬದಲಾವಣೆಗಳು ಇಲ್ಲಿವ್ಯಾಸಂಗ ಮಾಡುತ್ತಿರುವ ಯಲ್ಲಾಪುರದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೆ ಉನ್ನತ ಶಿಕ್ಷಣಕ್ಕಾಗಿ ಬೇರೆ ಬೇರೆ ಮಹಾನಗರಗಳಿಗೆ ತೆರಳುತ್ತಿದ್ದ ಯಲ್ಲಾಪುರದ ವಿದ್ಯಾರ್ಥಿಗಳು ಈಗ ಯಲ್ಲಾಪುರದಲ್ಲೇ ಉತ್ತಮ ಶಿಕ್ಷಣ ಪಡೆಯಬಹುದು ಎಂಬ ಭರವಸೆ ಮೂಡಿಸಲಿದೆ. ಈ ಬದಲಾವಣೆಗಳು ಯಲ್ಲಾಪುರದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಎಂಬುದರಲ್ಲಿ ಸಂದೇಹವಿಲ್ಲ.