ಯಲ್ಲಾಪುರ ; ಉದ್ಯಮನಗರ ನಿವಾಸಿ ರೇಣುಕಾ ಕಲ್ಲಪ್ಪ ಉಣಕಲ್ ಅವರು ಕಳೆದ ಸೋಮವಾರ ತಮ್ಮ ಪರ್ಸ್ ಕಳೆದುಕೊಂಡಿದ್ದರು. ರೇಣುಕಾ, ಆಧಾರ ಕಾರ್ಡ್ ತಿದ್ದುಪಡಿ ಮಾಡಿಸಲು ತಾಲೂಕಾ ಪಂಚಾಯತಕ್ಕೆ ಹೋಗಿ ಮರಳುವಾಗ, ಪರ್ಸ್ ಕಳೆದುಕೊಂಡು ಬಹಳ ಬೇಜಾರಾಗಿದ್ದರು.
ಪರ್ಸ್ ಕಳೆದುಕೊಂಡಿದ್ದ ರೇಣುಕಾ ಮನೆಯ ಅಕ್ಕಪಕ್ಕ ಹೇಳಿಕೊಂಡಿದ್ದರು. ಇದರ ಮಧ್ಯೆ, ಯಲ್ಲಾಪುರ ನ್ಯೂಸ್ ನಲ್ಲಿ ಜೂನ್ 15ರ ಸೋಮವಾರ "ಹಣವಿರುವ ಲೇಡಿಸ್ ಪರ್ಸ್ ಸಿಕ್ಕಿದೆ, ಸಂಪರ್ಕಿಸಿ ಯೋಗೇಶ ಶಾನಭಾಗ" ಎಂಬ ಶೀರ್ಷಿಕೆಯ ಸುದ್ದಿ ಪ್ರಕಟವಾಯಿತು. ಈ ಸುದ್ದಿಯನ್ನು ರೇಣುಕಾ ಹತ್ತು ವರ್ಷದ ಹಿಂದೆ ಕಲಿತಿದ್ದ ಗಣಪತಿ ಗಲ್ಲಿ ಶಾಲೆಯ ಟೀಚರ್ ನಾಗರತ್ನಾ ನಾಯಕ್ ಇವರು ಓದಿ, ತಕ್ಷಣವೇ ತಮ್ಮ ಮಾಜಿ ವಿದ್ಯಾರ್ಥಿನಿ ರೇಣುಕಾಳಿಗೆ ತಿಳಿಸಿದರು.
ನಾಗರತ್ನಾ ನಾಯಕ್‌ಗೆ ಶಾನಭಾಗ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜು ಕಸ್ತೂರೇ ಮತ್ತು ವಸಂತ್ ಇವರಿಂದ ರೇಣುಕಾ ಪರ್ಸ್ ಕಳೆದುಕೊಂಡಿರುವ ಬಗ್ಗೆ ತಿಳಿದುಬಂದಿತ್ತು. ನಂತರ ಅವರು ರೇಣುಕಾಳಿಗೆ ಮಾಹಿತಿ ನೀಡಿದ್ದರು. ಯೋಗೇಶ ಶಾನಭಾಗ ಅವರನ್ನು ಸಂಪರ್ಕಿಸಿದ ರೇಣುಕಾ ಪರ್ಸ್ ಬಣ್ಣ, ಆಕಾರ, ಹಾಗೂ ಅದರಲ್ಲಿದ್ದ ಹಣದ ನೋಟುಗಳ ಬಗ್ಗೆ ನಿಖರವಾಗಿ ವಿವರ ನೀಡಿದ್ದರು. ಸಿಕ್ಕಿರುವ ಪರ್ಸ್ ರೇಣುಕಾ ಅವರದೇ ಎಂದು ಖಚಿತಪಡಿಸಿಕೊಂಡು ಯೋಗೇಶ ಶಾನಭಾಗ ಅವರು ಪ್ರಾಮಾಣಿಕವಾಗಿ ಪರ್ಸ್ ರೇಣುಕಾಗೆ ಬುಧವಾರ ಹಿಂದಿರುಗಿಸಿದರು. ಇದಕ್ಕಾಗಿ ರೇಣುಕಾ ಯೋಗೇಶ ಶಾನಭಾಗ ಮತ್ತು ಈ ಸುದ್ದಿಯನ್ನು ಪ್ರಚಾರ ಪಡಿಸಿದ ಯಲ್ಲಾಪುರ ನ್ಯೂಸ್‌ಗೆ ಕೃತಜ್ಞತೆ ಸಲ್ಲಿಸಿದರು.
ಯೋಗೇಶ ಶಾನಭಾಗ ಅವರಿಗೆ 17 ಕಡೆಯಿಂದ ಕರೆಗಳು!
ಯಲ್ಲಾಪುರ ನ್ಯೂಸ್‌ನಲ್ಲಿ ಪರ್ಸ್ ಸಿಕ್ಕಿರುವ ಕುರಿತು ಸುದ್ದಿ ಪ್ರಕಟವಾದ ನಂತರ, ಎರಡು ದಿನಗಳಲ್ಲಿ ಯೋಗೇಶ ಶಾನಭಾಗ ಹತ್ತು ಕರೆಗಳನ್ನು ಸ್ವೀಕರಿಸಿದರು. ಇಲ್ಕಿಯವರೆಗೆ ಒಟ್ಟು 17 ದೂರವಾಣಿ ಕರೆಗಳು ಬಂದಿವೆ. ಪರ್ಸ್ ಬಣ್ಣ, ಆಕಾರ, ಹಾಗೂ ಅದರಲ್ಲಿದ್ದ ಹಣ, ಜೊತೆಗೆ ಮತ್ತಷ್ಟು ಹಾಳೆಗಳ ಬಗ್ಗೆ ಹೋಲಿಕೆ ಮಾಡಿದಾಗ, ತನಗೆ ಸಿಕ್ಕಿರುವ ಪರ್ಸ್ ಕರೆ ಮಾಡಿದವರದಲ್ಲ ಎಂದು ತಿಳಿದುಬಂದಿತು. ಯಲ್ಲಾಪುರದಿಂದ ನಾಲ್ಕು ಕರೆ, ಬೆಳಗಾವಿ, ಕಾರವಾರ, ಅಂಕೋಲಾ, ಶಿರಸಿ, ಮುಂಡಗೋಡ ಸೇರಿದಂತೆ ಅನೇಕ ಗ್ರಾಮೀಣ ಭಾಗದವರು ಕರೆ ಮಾಡಿದ್ದರು. ಬಹುತೇಕ ಕರೆ ಮಾಡಿದವರಲ್ಲಿ ಹಣ, ಐಡಿ ಕಾರ್ಡ್, ಮತ್ತು ಮಹತ್ವವಾದ ದಾಖಲೆಗಳನ್ನು ಕಳೆದುಕೊಂಡವರೇ ಆಗಿದ್ದರು ಎಂದು ಯೋಗೇಶ ಶಾನಭಾಗ ತಿಳಿಸಿದ್ದಾರೆ.
ಯಲ್ಲಾಪುರ ನ್ಯೂಸ್ ವಿನಂತಿ,
ಯಲ್ಲಾಪುರ ನ್ಯೂಸ್ ಓದುವುದರಲ್ಲಿ ವಿನಂತಿ ತಮಗೂ ಎಂದಾದರೂ ಪರ್ಸ್ ಅಥವಾ ಬ್ಯಾಗ್ ಏನಾದರೂ ಸಿಕ್ಕಿದ್ದರೆ ನಮ್ಮ ಗಮನಕ್ಕೆ ತನ್ನಿ. ಅಥವಾ ಸಮೀಪದ ಪೊಲೀಸ್ ಸ್ಟೇಷನ್ ಗೆ ಅದನ್ನು ಒಪ್ಪಿಸಿ. ಯಾವುದೇ ಕಾರಣಕ್ಕೂ ಹಣ ಇದ್ದರೆ ಹಣದ ಮೊತ್ತವನ್ನು ಬ್ಯಾಗ್ ಅಥವಾ ಪರ್ಸ್ ಬಣ್ಣ ಆಕಾರ ಪ್ರಚಾರಪಡಿಸಬೇಡಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಡ್ರೈವಿಂಗ್ ಲೈಸನ್ಸ್, ಮೆಡಿಕಲ್ ಚೀಟಿಗಳು, ತಪಾಸಣೆ ನಡೆಸಿರುವ ವಿವರಗಳಂತಹ ದಾಖಲೆಗಳಿದ್ದರೆ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿ. ಪರ್ಸ್ ನಲ್ಲಿರುವ ಯಾವುದೇ ಚಿಕ್ಕ ಹಾಳೆಯನ್ನು ಕೂಡ ಹಾಳು ಮಾಡಬೇಡಿ. ಇಂದಿನ ದಿನದಲ್ಲಿ ಹಣಕ್ಕಿಂತ ದಾಖಲೆಗಳನ್ನು ಮರಳಿ ಪಡೆಯುವುದು ಬಹಳ ಕಷ್ಟವಾಗಿದ್ದು, ಎಲ್ಲವನ್ನು ಕಾಯ್ದಿಟ್ಟುಕೊಂಡಿರಿ, ಕಳೆದುಕೊಂಡ ವಾರಸುದಾರಿಗೆ ಹಿಂದಿರುಗಿಸಿ ಪ್ರಾಮಾಣಿಕತ ಮೆರೆಯಿರಿ ಇದು ನಮ್ಮ ಓದುಗರಿಗೆ ಮನವಿ.