ಯಲ್ಲಾಪುರ : ಸೋಮವಾರ ರಾತ್ರಿ ಯಲ್ಲಾಪುರ ತಾಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಗುಳ್ಳಾಪುರದಲ್ಲಿ ಮನೆಯ ಮೇಲೆಮರ ಬಿದ್ದು ಹಾನಿಯಾಗಿದೆ.
ಕಂದಾಯ ಇಲಾಖೆಯ ಪ್ರಕಾರ, ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆಯವರೆಗೆ 24 ಗಂಡೆಯಲ್ಲಿ 79.2 ಮಿ.ಮೀ ಮಳೆ ದಾಖಲಾಗಿದೆ. ತಾಲೂಕಿನಲ್ಲಿ ಈವರೆಗೆ 1108.8 ಮಿ.ಮೀ ಮಳೆಯಾಗಿದೆ. ಈ ಅಬ್ಬರದ ಮಳೆಯಿಂದಾಗಿ ಒಳ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಜನಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಳೆಯ ತೀವ್ರತೆಯನ್ನು ಪರಿಗಣಿಸಿ, ಜಿಲ್ಲಾಧಿಕಾರಿಗಳು ಮಂಗಳವಾರಕ್ಕೆ ಯಲ್ಲಾಪುರ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.