ಯಲ್ಲಾಪುರ: ಯಲ್ಲಾಪುರ ಲಾರಿ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಸೋಮವಾರ ಅಂಕೋಲಾದ ಶಿರೂರು ಪ್ರದೇಶದಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಪಕ್ಕದಲ್ಲಿ ನಿಂತ ಲಾರಿ ಚಾಲಕರು ಕ್ಲೀನರ್ ಗಳ ಪರಿಸ್ಥಿತಿಯನ್ನು ಅವಲೋಕಿಸಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದರು.
ನಂತರ ಅಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗಿ, ರಸ್ತೆ ಪಕ್ಕದಲ್ಲಿ ನಿಂತಿರುವ ಲಾರಿಗಳ ಚಾಲಕರ ದೈನಂದಿನ ಊಟ ಇನ್ನಿತರ ವ್ಯವಸ್ಥೆಯ ಬಗ್ಗೆ ಗಮನ ಸೆಳೆದುರು. ಮತ್ತು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆಯುಳ್ಳ ಚಾಲಕರನ್ನು ಬೇಗ ಪತ್ತೆಹಚ್ಚಲು ಕೇಳಿಕೊಂಡರು.
ಈ ಸಂದರ್ಭದಲ್ಲಿ, ಯಲ್ಲಾಪುರ ಸಂಘದ ಅಧ್ಯಕ್ಷ ಸುಜಯ್ ಮರಾಠಿ, ಕಾರ್ಯದರ್ಶಿ ಅಮಿತ್ ನಾಯ್ಕ, ಖಜಾಂಚಿ ಖ್ವಾಜಾ ಅತ್ತರ್, ಗೌರವಾಧ್ಯಕ್ಷ ಮಹೇಶ ನಾಯ್ಕ, ನಾಗೇಂದ್ರ ಭಟ್, ಸುಧಿ ಭಟ್, ಅಮಿತ ನಾಯಕ, ಸಂಕೇತ ನಾಯಕ, ಸಾದಿಕ್, ಮುರಳಿ ರಾವಲ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದರು. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಎಸಿಪಿ ಮತ್ತು ಸಿಬ್ಬಂದಿಗಳು, ಹಾಗೆಯೇ ಕಾರವಾರ ಶಾಸಕರಾದ ಸತೀಶ್ ಸೈಲ್ ಅವರನ್ನು ಭೇಟಿ ಮಾಡಿ, ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಚಾಲಕ ಅರ್ಜುನ್ ನ ಪತ್ತೆಹಚ್ಚುವ ಕುರಿತು ಅಧಿಕಾರಿಗಳು ಮತ್ತು ಚಾಲಕ ಮಾಲಿಕರ ನಡುವೆ ಮಾತಿನ ವಾಗ್ವಾದ ನಡೆಯಿತು. ರಸ್ತೆ ಪಕ್ಕದಲ್ಲಿ ನಿಂತಿರುವ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಯಲ್ಲಾಪುರ ಚಾಲಕ ಮಾಲಿಕ ಸಂಘದವರು ಜಿಲ್ಲಾಡಳಿತವನ್ನು ಕೇಳಿಕೊಂಡರು.
ಯಲ್ಲಾಪುರ ಸಂಘದವರು ಮುಂದಿನ ದಿನಗಳಲ್ಲಿ, ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ ದುಬಾರಿ ಟೋಲ್ ಸಂಗ್ರಹಿಸುತ್ತಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಐಆರ್‌ಬಿ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಯಲ್ಲಾಪುರ ಸಂಘದ ಅಧ್ಯಕ್ಷ ಸುಜಯ್ ಮರಾಠಿ ಹಾಗೂ ಗೌರವಾಧ್ಯಕ್ಷ ಮಹೇಶ ನಾಯ್ಕ ಶಿರೂರ ಭೇಟಿಯ ನಂತರ ಯಲ್ಲಾಪುರ ನ್ಯೂಸ್ ಜೊತೆ ಮಾತನಾಡಿ, ಗುಡ್ಡ ಕುಸಿತದ ನಂತರ ಅಲ್ಲಿ ನಿಲ್ಲಿಸಿಕೊಂಡಿರುವ ವಾಹನ ಚಾಲಕರು ಮತ್ತು ಕ್ಲೀನರ್ ಪರಿಸ್ಥಿತಿಗಳು ಬಹಳ ಗಂಭೀರವಾಗಿದೆ. ಅದರಲ್ಲೂ ಬಾರಿ ವಾಹನಗಳ ಚಾಲಕರು ಎಲ್ಲಿಯೂ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ ಅವರಿಗೆ ಸ್ಥಳದಲ್ಲಿ ಊಟ ಸಿಗುತ್ತಿಲ್ಲ. ಕುಟುಂಬಸ್ಥರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಾನವೀಯ ನೆಲೆಯಲ್ಲಿ ಅಲ್ಲಿಯ ಚಾಲಕರು ಕ್ಲೀನರ್ ಗಳಿಗೆ ಸ್ಥಳೀಯ ಆಡಳಿತಗಳು ವ್ಯವಸ್ಥೆ ಮಾಡಿಕೊಡಬೇಕು.