ಯಲ್ಲಾಪುರ: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾದ ಅವಘಡದ ಸ್ಥಳಕ್ಕೆ ಶನಿವಾರ ಭೇಟಿ ನೀಡಲು ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಯಲ್ಲಾಪುರದ ಗಾಂಧಿ ವೃತ್ತದ ಬಳಿ ಶನಿವಾರ ಬೆಳಿಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಅವರು ಅಂಕೋಲಾಕ್ಕೆ ತೆರಳಿದರು.
ಕೇಂದ್ರ ಸಚಿವರಾಗಿ ಪ್ರಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ಕುಮಾರಸ್ವಾಮಿಯವರನ್ನು ಜಿಲ್ಲೆಗೆ ಬರಮಾಡಿಕೊಳ್ಳಲು ಕುಮಟಾ ಹಾಗೂ ಶಿರಸಿ ಕಡೆಯಿಂದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಬಹಳಷ್ಟು ಜನ ಆಗಮಿಸಿದ್ದರು. ಏಕಾಏಕಿ ಮುಗಿಬಿದ್ದ ಜನರಿಂದಾಗಿ ಮಾಧ್ಯಮದವರೊಂದಿಗೆ ಎಚ್. ಡಿ. ಕುಮಾರಸ್ವಾಮಿ ಮಾತನಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಯಿತು.
ಕುಮಾರಸ್ವಾಮಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 63ರ ಮೂಲಕ ಯಲ್ಲಾಪುರ ರಸ್ತೆ ಮಾರ್ಗವಾಗಿ ಅಂಕೋಲಾದ ಶಿರೂರು ತಲುಪಲಿದ್ದಾರೆ. ನಂತರ ಅಲ್ಲಿ ನಡೆದ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಧಿಕಾರಿಗಳ ಜೊತೆ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಕೇಂದ್ರದಿಂದ ಹೊಸ ಪರಿಹಾರದ ಬಗ್ಗೆಯೂ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಯಲ್ಲಾಪುರದಲ್ಲಿ ಜೆಡಿಎಸ್ ಜಿಲ್ಲಾ ಪ್ರಮುಖರಾದ ಸೂರಜ್ ನಾಯ್ಕ ಸೋನಿ, ರಾಜೇಶ್ವರಿ ಹೆಗಡೆ ಶಿರಸಿ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ತಾಲೂಕಾ ವಕ್ತಾರ ಕೆ ಟಿ ಹೆಗಡೆ, ಜೆಡಿಎಸ್ ಸುಧಾಕರ ನಾಯ್ಕ ಮಂಚಿಕೇರಿ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಪ.ಪಂ ಮಾಜಿ ಸದಸ್ಯ ಗಜಾನನ ನಾಯ್ಕ, ಹಾಗೂ 100 ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.