ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಗ್ರಾಮದಲ್ಲಿ ವೀರಸಾವರ್ಕರ ಪುತ್ಥಳಿಯನ್ನು ಗ್ರಾಮಸ್ಥರು ನಿರ್ಣಯಿಸಿದ ಜಾಗದಲ್ಲಿಯೇ ಪ್ರತಿಷ್ಠಾಪಿಸಲಾಗುವುದು ಎಂದು ಯಲ್ಲಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಸಾದ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲ ಅಧಿಕಾರಿಗಳು ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಮತ್ತು ಪುತ್ಥಳಿ ಸ್ಥಾಪನೆಗೆ ವಿರೋಧಿಸುವುದು ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾರತಕ್ಕಾಗಿ ತಮ್ಮನ್ನು ಸಮರ್ಪಿಸಿದ ಸಾವರ್ಕರರನ್ನು ವಿರೋಧಿಸುವ ಮನೋಭಾವಕ್ಕೆ ನಮ್ಮ ದಿಕ್ಕಾರವಿದೆ" ಎಂದು ಹೆಗಡೆ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಯಲ್ಲಾಪುರ ಮಂಡಲ, ವಜ್ರಳ್ಳಿ ಗ್ರಾಮಸ್ಥರ ನಿರ್ಣಯಕ್ಕೆ ಬೆಂಬಲಿಸುತ್ತದೆ. "ಸಾವರ್ಕರ ಪುತ್ಥಳಿಗೆ ವಿರೋಧಿಸಿದ್ದರೆ, ಹೋರಾಟದ ಮೂಲಕ ಪುತ್ಥಳಿಯನ್ನು ನಿರ್ಮಿಸುವ ಬಗ್ಗೆ ನಮಗೆ ತಿಳಿದಿದೆ," ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುಂದಿನ 2-3 ದಿನಗಳಲ್ಲಿ ಅ ಭಾಗದ ಪ್ರಮುಖರು ಸೇರಿ ಮಾಧ್ಯಮಕ್ಕೆ ಗ್ರಾಮಸಭೆಯಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಅಂದು ನಡೆದಘಟನೆಗಳನ್ನು ಜಿಲ್ಲೆಗೆ ಅನಾವರಣಗೊಳಿಸಲಾಗುವುದು. ಮತ್ತು "ವಿರೋಧಿಸಿದ ಅಧಿಕಾರಿಯನ್ನು ಬೇಟಿ ಮಾಡಿ, ಯಲ್ಲಾಪುರ ಬಿಜೆಪಿ ಮಂಡಲವು ಪ್ರಶ್ನಿಸಲಿದೆ. ಈ ವಿಷಯವನ್ನು ಸಮಾಜವೇ ಪ್ರಶ್ನಿಸಬೇಕಾಗಿದೆ" ಎಂದು ಪ್ರಸಾದ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.