ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣ ಗಲ್ಲಿಯಲ್ಲಿರುವ ಅತ್ಯಂತ ಪುರಾತನ ಈಶ್ವರ ದೇವಸ್ಥಾನದಲ್ಲಿ ಜುಲೈ 15ರಂದು ಸೋಮವಾರ ರಾತ್ರಿ 8 ಗಂಟೆಗೆ ವಿಶೇಷ ಪೂಜೆ ಕಾರ್ಯಕ್ರಮಗಳು ಆರಂಭವಾಗಲಿವೆ.
ಈ ಸಂದರ್ಭದಲ್ಲಿ ಅಘೋರಾಸ್ತ್ರ, ಮಂತ್ರ ಜಪ, ಹೋಮ, ನಾಮಸ್ಮರಣೆ ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಹ, ಕಲಶ ಪ್ರತಿಷ್ಠಾಪನೆ, ಜಪ, ಹೋಮ, ಪೂರ್ಣಹುತಿ ಹಾಗೂ ಮಹಾ ಮಂಗಳಾರತಿ ಹಾಗೂ ದಿಗ್ಗಲಿ ಕ್ಷೇತ್ರಪಾಲ ಬಲಿಯಂತಹ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ ಎಂದು ಈಶ್ವರ ದೇವಸ್ಥಾನ ಆಡಳಿತ ಕಮಿಟಿ ತಿಳಿಸಿದೆ.
ದೇವಾಲಯದಲ್ಲಿ ಪ್ರತಿದಿನವೂ ಪೂಜಿಸಲ್ಪಡುವ ವಿಗ್ರಹಗಳು ಜೀರ್ಣಾವಸ್ಥೆಯಲ್ಲಿರುವುದರಿಂದ, ಶುಭ ಮುಹೂರ್ತದಲ್ಲಿ ಆಗಮ ಶಾಸ್ತ್ರದ ವಿಧಿ-ವಿಧಾನಗಳ ಪ್ರಕಾರ ನೂತನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ನಿರ್ಧಾರವನ್ನು ಭಕ್ತರು ಹಾಗೂ ಆಡಳಿತ ಮಂಡಳಿ ತೆಗೆದುಕೊಂಡಿದೆ. ಈ ಮಹತ್ವದ ಪ್ರತಿಷ್ಠಾನ ಕಾರ್ಯಕ್ರಮ ಪೂರ್ವಭಾವಿಯಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ, ರಾತ್ರಿ 9 ಗಂಟೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ದೇವಸ್ಥಾನ ಆಡಳಿತ ಕಮಿಟಿ ಮನವಿ ಮಾಡಿದೆ. ಶ್ರೇಷ್ಠ ಇತಿಹಾಸವಿರುವ ಈಶ್ವರ ದೇವಾಲಯದಲ್ಲಿ ದೇವರ ಪೂಜಾ ವಿಗ್ರಹಗಳಾದ ಈಶ್ವರ, ನಂದಿ, ನಾಗ ದೇವರ ನೂತನ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ಕೆ, ಸಾರ್ವಜನಿಕ ಸದ್ಭಕ್ತರು ತನು, ಮನ, ಧನದ ಸಹಾಯ ನೀಡಿ ಪುನೀತರಾಗಬೇಕಾಗಿ ಕಮಿಟಿಯವರು ಮನವಿ ಮಾಡಿದ್ದಾರೆ.