Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday, 5 February 2023

ಆನಗೋಡ ಕಸಾಪ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಟಿ.ವಿ ಕೋಮಾರ ಅವರ ಸಂಪೂರ್ಣ ಮಾತುಗಳು

ಕನ್ನಡ ಸಾಹಿತ್ಯ ಪರಿಷತ್ ಯಲ್ಲಾಪುರ ತಾಲೂಕಾ ಘಟಕದ ಆಶ್ರಯದಲ್ಲಿ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಶನಿವಾರ ನಡೆದ ಯಲ್ಲಾಪುರ ಕಸಾಪ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಟಿ.ವಿ ಕೋಮಾರ ಅವರ ಸಂಪೂರ್ಣ ಮಾತುಗಳು.

    ಆನಗೋಡಿನಂಥಹ ಪ್ರಕೃತಿ ಪ್ರೇಮಿ ಹಳ್ಳಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಸಮ್ಮೇಳನವನ್ನು ಉದ್ಘಾಟಿಸಿದ ಸಾಹಿತಿ ಲೇಖಕಿಯರಾದ ಭುವನೇಶ್ವರಿ ಹೆಗಡೆಯವರೇ, ನನ್ನ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿದವರೂ ಕಾರ್ಮಿಕ ಸಚಿವರೂ ಆಗಿರುವ ಶಿವರಾಮ ಹೆಬ್ಬಾರವರೇ, ಶಾಂತಾರಾಮ ಸಿದ್ಧಿ ವಿಧಾನ ಪರಿಷತ್‌ ಸದಸ್ಯರು ಅವರೇ, ಪ್ರಮೋದ ಹೆಗಡೆ ವಿಕೇಂದ್ರಿಕರಣ ಯೋಜನೆ ಹಾಗೂ ಸಂಸ್ಕೃತಿ ಚಿಂತಕರೇ, ಜಿಲ್ಲಾ ಕ.ಸಾ.ಪ, ಅಧ್ಯಕ್ಷರಾದ ಬಿ. ಎನ್. ವಾಸರೆ ರವರೇ, ತಾಲೂಕಾ ಕ.ಸಾಪ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟರವರೇ, ಕೃಷ್ಣ ಕಾಮ್ಯರ ತಹಶೀಲದಾರರವರೇ, ಎನ್. ಆರ್. ಹೆಗಡೆ ಶಿಕ್ಷಣಾಧಿಕಾರಿಗಳುರವರೇ, ವೇದಿಕೆಯ ಮೇಲಿರುವ ಎಲ್ಲಾ ಗಣ್ಯರೇ ಹಾಗೂ ಕನ್ನಡಾಭಿಮಾನಿ ಸಹೋದರ ಸಹೋದರಿಯರೇ,
   ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಕಾರಣಗಳೇನು ಎಂದು ಪ್ರಶ್ನಿಸಿಕೊಂಡಾಗ ನನಗೆ ದೊರೆತ ಉತ್ತರಗಳು ಇವು. ನಮಗೆ ದೈನಂದಿನ ಜೀವನ ಜಂಜಾಟದಲ್ಲಿ ನಮ್ಮ ಇತಿಹಾಸ ಕಲೆ ಪರಿಸರ ಸಂಸ್ಕೃತಿ ಸಾಹಿತ್ಯಗಳ ಬಗ್ಗೆ ಹೆಚ್ಚು ಗಮನ ಕೊಡಲಿಕ್ಕೆ ಸಾಧ್ಯವಾಗುವುದಿಲ್ಲ. ದಿನಚರಿಗಳಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಇವುಗಳ ಬಗ್ಗೆ ಅವಲೋಕನ ಮಾಡುವುದು. ಇತಿಹಾಸ ಕಲೆ ಸಂಸ್ಕೃತಿಗಳು ನಶಿಸಿ ಹೋಗದೇ ಮುಂದಿನ ಪೀಳಿಗೆಗೂ ಮುಂದುವರಿಯುವಂತೆ ಮಾಡುವುದು ಅವಶ್ಯ. ಇದಕ್ಕೆಂದೆ ನಾವು ಯಕ್ಷಗಾನ, ನಾಟಕ, ಸಂಗೀತ, ಸಾಂಸ್ಕೃತಿಕ ಉತ್ಸವ, ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತೇವೆ. ಒಂದುವರೆ ಸಾವಿರ ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಇರುವ ನಮ್ಮ ಕನ್ನಡ ಸಾಹಿತ್ಯದ ಬಗ್ಗೆ ಗೊತ್ತಿಲ್ಲದವರಿಗೆ ಅರಿವು ಮೂಡಿಸಲು, ಗೊತ್ತಿರುವವರಿಗೆ ಇನ್ನೊಮ್ಮೆ ನೆನಪಿಸಲು, ತಾಲೂಕಿನ, ಜಿಲ್ಲೆಯ, ರಾಜ್ಯದ ಸಾಹಿತಿಗಳ ಪರಿಚಯ ಎಲ್ಲರಿಗೂ ಮಾಡಿಸಲು, ಅವರಿಗೆ ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಮಾಡುವ ಉತ್ಸಾಹ ನೀಡಲು, ಸಾಹಿತ್ಯಕ್ಕೆ ಅಪಾರ ಕಾಣಿಕೆ ನೀಡಿರುವ ಸಾಹಿತಿಗಳಿಗೆ ಗೌರವಿಸಲು, ಪುರಸ್ಕರಿಸಲು ಸಾಹಿತ್ಯದ ಮೂಲಕ ಸನ್ಮಾರ್ಗದಲ್ಲಿ ನಡೆಯುವಂತಾಗಲು ಜಾತಿ ಧರ್ಮಗಳ ಅಂತರ ಕಡಿಮೆ ಮಾಡಲು ಸಾಹಿತ್ಯ ಸಮ್ಮೇಳನಗಳನ್ನು ಮಾಡುತ್ತೇವೆ.

ಆತ್ಮೀಯ ಕನ್ನಡದ ಹೃದಯವಂತರೇ,

೧೯೭೨-೭೩ ರಲ್ಲಿ ಯಲ್ಲಾಪುರದಲ್ಲಿ ದಿ|| ಬಿ.ಎಚ್‌.ಶ್ರೀಧರವರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ನಂತರ ದೀರ್ಘವಾದ ಮುವತ್ತು ಮೂರು ವರ್ಷಗಳ ಮೇಲೆ ೯-೪-೨೦೦೯ ರಲ್ಲಿ ದಿ|| ನಾ, ಸು. ಭರತನಹಳ್ಳಿಯವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. ಮತ್ತೆ ಐದು ವರ್ಷಗಳ ನಂತರ ತಾಲೂಕಿನ ಸಾಹಿತ್ಯ ಸಮ್ಮೇಳನ ವನರಾಗ ಶರ್ಮಾ ಅಧ್ಯಕ್ಷತೆಯಲ್ಲಿ ೧೫-೧೧-೨೦೧೧ ರಲ್ಲಿ ಜರುಗಿತು. ಆಮೇಲೆ ನಮ್ಮ ತಾಲೂಕಿನ ಸಂಜಾತರಾದ ಶ್ರೀಧರ ಬಳಗಾರ ಇವರ ಅಧ್ಯಕ್ಷತೆಯಲ್ಲಿ ತಾ: ೧-೨-೨೦೧೪ ರಲ್ಲಿ ಮೂರನೇ ಸಮ್ಮೇಳನ ಗಾಂಧಿಕುಟೀರದಲ್ಲಿ ನಡೆಯಿತು. ನಂತರ ಎ॥ ಪ. ಗ. ಭಟ್ಟರ ಅಧ್ಯಕ್ಷತೆಯಲ್ಲಿ ೧೩-೧೪ ಫೆಬ್ರುವರಿ ೨೦೧೭ ರಲ್ಲಿ ನಾಲ್ಕನೇ ತಾಲೂಕಾ ಸಮ್ಮೇಳನ ಜರುಗಿತು. ಮನಃ ಆರು ವರ್ಷಗಳ ನಂತರ ತಾಲೂಕಿನ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನಕ್ಕೆ ವಿಶೇಷ ಅರ್ಥ ಕಲ್ಪಸಿ ಹೇಳಬೇಕೆಂದರೆ ಹಳ್ಳಿಯಿಂದ ದಿಲ್ಲಿಗೆ ಅಂತ ಮೊದಲು ಹೇಳುತ್ತಿದ್ದರು. ಈಗ ದಿಲ್ಲಿಯಿಂದ ಹಳ್ಳಿಗೆ ಎಂಬಂತೆ ತಾಲೂಕಿನ ಮುಖ್ಯ ಸ್ಥಳವನ್ನು ಬಿಟ್ಟು ಹಳ್ಳಿಯಾಗಿರುವ, ನಿಸರ್ಗದ ಮಡಿಲಿನಲ್ಲಿರುವ ಆನಗೋಡಿನಲ್ಲಿ ನಡೆಯುತ್ತಿರುವುದು ಆದರ್ಶ ಪ್ರಾಯವಾಗಿದೆ. ಈಗಿನ ಯುವ ಸಮೂಹಕ್ಕೆ ಹಳ್ಳಿಯ ಜೀವನದ ಒಳಹರಹು ಅರ್ಥವಾಗುವುದಿಲ್ಲ. ಜನರು ಗೂಳೆ ಹೊರಟಂತೆ ಈಗಿನ ಯುವಕರು ಪೇಟೆ, ಪಟ್ಟಣಗಳಿಗೆ ಅಂದರೆ ಬೆಂಗಳೂರು, ಮುಂಬೈ, ಕಲ್ಕತ್ತಾ, ದಿಲ್ಲಿ ಎಂತ ಹೊರಟಿದ್ದಾರೆ. ಅಷ್ಟೆ ಏಕೆ ಅಮೇರಿಕಾ. ಇಂಗ್ಲೆಂಡ, ಕೆನಡಾಗಳನ್ನು ನೆರೆಮನೆಯನ್ನಾಗಿ ಕಾಣುತ್ತಿರುವ ಈ ದಿನಗಳಲ್ಲಿ ಸಾಹಿತ್ಯ ಪರಿಷತ್ತು ಹಳ್ಳಿಗಳಿಗೆ ಬರುತ್ತಿರುವುದು ಸಂತೋಷದ ಸಂಗತಿ. ಇದಕ್ಕೆ ಕಾರಣರಾಗಿರುವ ರಾಜ್ಯಾಧ್ಯಕ್ಷರಾದ ಮಹೇಶ ಜೋಶಿಯವರು, ಜಿಲ್ಲಾ ಅಧ್ಯಕ್ಷರಾದ ಬಿ.ಎನ್ ವಾಸರೆಯವರು, ತಾಲೂಕಾ ಅಧ್ಯಕ್ಷರಾಗಿರುವ ವಿದ್ವಾನ್ ಸುಬ್ರಹ್ಮಣ್ಯ ಭಟ್ಟರವರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತಾಲೂಕಿನ ಕನ್ನಡ ಸಾಹಿತ್ಯ ಪ್ರೇಮಿಗಳು ಮತ್ತು ಆನಗೋಡಿನ ಕನ್ನಡದ ಮನಸ್ಸುಗಳು ಅಂದುಕೊಂಡಿದ್ದೇನೆ.   
    ಈ ಐದನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಗುರುತಿಸಿ ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಗೌರವ ಸ್ಥಾನದಲ್ಲಿ ಕುಳ್ಳಿರಿಸಿದ್ದೀರಿ ಸಂತೋಷವಾಗಿದೆ. ಧನ್ಯತೆಯ ಭಾವ ತುಂಬಿ ತುಳುಕುತ್ತಿದೆ. ತಾಲೂಕಿನ ನನ್ನ ಅಭಿಮಾನಿಗಳಿಗೆ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಸಮ್ಮೇಳನಕ್ಕೆ ಸೇರಿದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯರಿಗೆ ನಮಸ್ಕಾರಗಳೊಂದಿಗೆ ಧನ್ಯವಾದಗಳು.
    ಆತ್ಮೀಯರೇ, ಅವಿಭಕ್ತ ಕುಟುಂಬವಾಗಿರುವ ನಮ್ಮ ಮನೆಯಲ್ಲಿ ಅಜ್ಜ ತಿಮ್ಮಣ್ಣ, ದೊಡ್ಡಪ್ಪ ನಾರಾಯಣ, ದೊಡ್ಡಮ್ಮ ಲಕ್ಷ್ಮೀ, ಅಪ್ಪ ವೆಂಕಟ್ರಮಣ, ಅಮ್ಮ ಸೀತೆ, ಚಿಕ್ಕಪ್ಪ ರಾಮಚಂದ್ರ, ಚಿಕ್ಕಮ್ಮ ಗೌರಿ ಇವರೆಲ್ಲರ ಆರೈಕೆಯಲ್ಲಿ ಬೆಳೆದ ಮಗು ನಾನು, ಇಡೀ ಕುಟುಂಬಕ್ಕೆ ನಾನೊಬ್ಬನೇ ಹುಡುಗ. ಉಳಿದವರಲ್ಲರೂ ಹುಟ್ಟಿದಂತೆ ಹತ್ತು ವರ್ಷಗಳ ಒಳಗೆ ತೀರಿಕೊಳ್ಳುತ್ತಿದ್ದರು. ನನ್ನ ತಮ್ಮ ಶಿವರಾಮನೂ ಐದು ವರ್ಷಕ್ಕೆ ಕೈಲಾಸವಾಸಿಯಾಗಿದ್ದಾನೆ. ನನಗೆ ಶಿಕ್ಷಣ ತಿಳಿವಳಿಕೆ ನಡೆ ನುಡಿಗಳನ್ನೆಲ್ಲ ಕಲಿಸಿ ಕೊಟ್ಟ ಹಿರಿಯರೆಲ್ಲರನ್ನೂ ಸ್ಮರಿಸುತ್ತೇನೆ. ನನ್ನ ಅರ್ಧಾಂಗಿ ಶ್ರೀಮತಿ ನನ್ನ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಬಂದಾಗಿನಿಂದಲೂ ಸಹ ಬಾಳ್ವೆಯ ಜೀವನ ನಡೆಸುತ್ತಿರುವೆವು. ಮಗಳು ಪ್ರೀತಿ ಅಳಿಯ ಶಶಾಂಕರದು ಅಪರೂಪದ ದಾಂಪತ್ಯ ಇಬ್ಬರೂ ಧಾರವಾಡ ಹೈ ಕೋರ್ಟಿನಲ್ಲಿ ವಕೀಲರಾಗಿದ್ದಾರೆ. ಹಿರಿಯ ಮಗ ರಾಜೀವ ಮಗಳಂತಿರುವ ಸೊಸೆ ನಮೃತಾ ಮೊಮ್ಮಗ ಆವರು ಕೆನಡಾದಲ್ಲಿರುವುದು. ಈ ರಸ ಕ್ಷಣಗಳ ಬೇಸರದ ಸಂಗತಿ ಎರಡನೇ ಮಗ ರೋಹಿತನು ಜನಾನುರಾಗಿಯಾಗಿದ್ದನು. ೨೦೦೭ ರಲ್ಲಿ ಶುರುವಾದ ಕ್ಯಾನ್ಸರನಿಂದಾಗಿ ೨೭-೧೨-೨೦೦೯ ರಂದು ೧೯ ವರ್ಷ ಕ್ಕೆ ನಮ್ಮನ್ನಗಲಿದನು. ಪುತ್ರ ಶೋಕರಿ ಕ್ಷಣಕ್ಷಣಂ ಎಂದು ಪ್ರಾಜ್ಞರು ಹೇಳಿದ್ದು ಎಷ್ಟು ಸತ್ಯವಾಗಿದೆ ಎಂಬುದನ್ನು ಅನುಭವಿಸುತ್ತಿದ್ದೇನೆ. ಅಕ್ಕ ತಂಗಿ ಬಂಧು ಮಿತ್ರರನ್ನು ನೆನಪಿಸಿಕೊಳ್ಳುವುದು ನನ್ನ ಕರ್ತವ್ಯ ಜೊತೆಗೆ ದಿ|| ವಿ. ಎನ್. ಭಟ್ಟ ಉಪಾಧ್ಯ ಕಳಚೆ ಇವರು ದೊಡ್ಡಪ್ಪನವರೂ ಹೌದು ಜೀವನಕ್ಕೆ ದಾರಿದೀಪವಾಗಿಯೂ ಬೆಳಗಿದವರು. ತಂಗಿ ಸವಿತಾ ಶ್ರೀಪತಿ ಹಂಗಾರಿ, ತಮ್ಮ ಶಿವರಾಮ ದಂಪತಿ ಮತ್ತು ಆತ್ಮೀಯ ಜಿ. ವಿ. ಭಟ್ಟ ಉಪಾಧ್ಯರ ನೆನಪುಗಳು.

ಆತ್ಮೀಯರೇ

ನನ್ನ ಭಾಷಣವನ್ನು ಈ ರೀತಿಯಲ್ಲಿ ಎಂಗಡಿಸುತ್ತೇನೆ.

೧) ಕನ್ನಡ ಸಾಹಿತ್ಯದ ಇತಿಹಾಸ

೨) ನಮ್ಮ ತಾಲೂಕಿನ ಕಲೆ ಪರಿಸರದ ಕಿರು ಪರಿಚಯ

2.) ತಾಲೂಕಿನ ಸಾಹಿತಿಗಳ ಸಾಹಿತ್ಯ ಕಾಣಿಕೆ
_______
೧) ಕನ್ನಡ ಸಾಹಿತ್ಯದ ಇತಿಹಾಸ

ಕನ್ನಡ ಸಾಹಿತ್ಯಕ್ಕೆ ಒಂದುವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂತ ಸಂಶೋಧಕರು ಮತ್ತು ಪ್ರಾಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಂಫ ಪೂರ್ವ ಕಾಲದಲ್ಲಿ ಮೊಟ್ಟ ಮೊದಲಿಗೆ ಸಿಕ್ಕ ಕನ್ನಡ ಗ್ರಂಥವೆಂದರೆ ಕವಿರಾಜ ಮಾರ್ಗ. ಇದೊಂದು ಅಲಂಕಾರಿಕ ಗ್ರಂಥ, ಬಹುಶಃ ೯ ನೇ (ಕ್ರಿ.ಶ ೮೪) ಶತಮಾನದಲ್ಲಿ ಇದನ್ನು ರಚಿಸಿರಬೇಕೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಕ್ರಿಸ್ತ ಶಕ ೯೨೦ ರ ಸುಮಾರಿಗೆ ವಡ್ಡಾರಾಧನೆಯ ಕಾಲವೆನ್ನುತ್ತಾರೆ. ಶಿವಕೋಟ್ಯಾಚಾರ್ಯರಿಂದ ರಚಿತವಾದ ವಡ್ಡಾರಾಧನೆ ಎಂದ ಈ ಗದ್ಯ ಗ್ರಂಥವು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಕರೆಯುತ್ತಾರೆ, ಕ್ರಿಸ್ತಶಕ ೧೦ನೇ ಶತಮಾನಕ್ಕೆ ಸೇರಿದ ಪಂಪ ಕನ್ನಡದ ಅದಿಕವಿ, ಮಹಾಕವಿ ಎಂದು ಕರೆಯಿಸಿಕೊಂಡಿದ್ದಾರೆ, ಈ ಯುಗದ ಕವಿಗಳಲ್ಲಿ ಪಂಪ ಪೊನ್ನ ರನ್ನರನ್ನು ರತ್ನತ್ರಯರೆಂದು ಗೌರವಿಸುತ್ತಾರೆ. ಪಂಪನ ಭಾರತಕಾವ್ಯದಲ್ಲಿ ಬನವಾಸಿಯನ್ನು ವರ್ಣನೆ ಮಾಡಿರುವುದು ಕನ್ನಡ ಸಾಹಿತ್ಯದ ಇತಿಹಾಸದ ಪುಟಗಳಲ್ಲಿ ನಮ್ಮ ಮಲೆನಾಡನ್ನು ಚಿರ ಸ್ಥಾಯಿಯಾಗಿಸಿದೆ.

ಜಾಗದ ಭೋಗದಕ್ಕರದ ಗೇಯದ ಗೊಟ್ಟಿಯ ಲಂಪಿನಿಂ ಮಗಳಾಗರ ಮಾದ ಮಾನಸರೇ ಮಾಣಸರಂತಾಗಿ ಪುಟ್ಟಲೇ ನಾಗಿಯು ಮನೋ ತೀರ್ವಮವೇ ತೀರದೊಡಂ ಮಣಿದುಂಬಿಯಾಗಿ ಮುಟ್ಟುವುದು ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ

ಇದರ ಅರ್ಥ ಇಂತಹ ಸಗ್ಗದ ನಾಡಿನಲ್ಲಿ ಮರುಜನ್ಮವಿರುದಾದರೆ ಮನುಷ್ಯನಾಗಿ ಹುಟ್ಟಬೇಕು. ಆಗದಿದ್ದರೆ ಕಡೆಯ ಪಕ್ಷ ಕೋಗಿಲೆ, ಗಿಳಿ ಮರಿದುಂಬಿಯಾಗಿಯಾದರೂ ಹುಟ್ಟಿ ಈ ಸಿರಿ ಸಂಪತ್ತನ್ನು ಅನುಭವಿಸಬೇಕೆಂದು ಬನವಾಸಿಯನ್ನು ಮಲೆನಾಡನ್ನು ಹೊಗಳುತ್ತಾನೆ. ೧೨ ನೇ ಶತಮಾನದ ವಚನಕಾರರಿಂದ ತೊಡಗಿ ೧೯ನೇ ಶತಮಾನದ ಕೊನೆಯ ಮುದ್ದಣ್ಣನವರೆಗಿನ ದೀರ್ಘ ಕಾಲಾವಧಿಯನ್ನು ಮಧ್ಯಕಾಲಿನ ಕನ್ನಡ ಸಾಹಿತ್ಯವೆಂದು ಗುರುತಿಸುತ್ತಾರೆ. ಈ ಅವಧಿಯಲ್ಲಿ ದಾಸ ಸಾಹಿತ್ಯ ವಚನ, ರಗಳೆ, ಷಟ್ಪದಿ, ಕಂದ, ತ್ರಿಪದಿ, ಸಾಂಗತ್ಯ, ಗದ್ಯ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಕೃಷಿ ಸಾಗುತ್ತಾ ಚಂಪೂ ಕಾವ್ಯಗಳೂ ಗುರುತಿಸಿಕೊಂಡಿವೆ.

ವಚನಕಾರರಲ್ಲಿ ಬಸವಣ್ಣನವರು ಮುಖ್ಯರಾಗುತ್ತಾರೆ. ಜೊತೆಗೆ ೩೬೫ಕ್ಕಿಂತ ಹೆಚ್ಚು ವಚನಕಾರರಿದ್ದರೆಂದು ನಂಬಲಾಗಿದೆ.

ದಯವಿಲ್ಲದ ಧರ್ಮವದೇವು ದಯ್ಯ
ದಯವೇ ಬೇಕು ಸಕಲ ಪಾಣಿಗಳೆಲ್ಲರಲ್ಲಿ ದಯವೇ ಧರ್ಮದ ಮೂಲವಯ್ಯ ಕೊಡಲ ಸಂಗಯ್ಯನಂತಲ್ಲ ದೆಂತೊಲಿಯನಯ್ಯ

ಇದು ಬಸವಣ್ಣನವರ ವಚನ ದಯೇ ಅನುಕಂಪಗಳು ಇಲ್ಲದಿದ್ದರೆ ಯಾವ ಧರ್ಮವೂ ಉಳಿಯಲಾರದು ಎಂದು ಎಲ್ಲ ಧರ್ಮಗಳಿಗೂ ಸಂಭಂಧಿಸಿದಂತೆ ಹೇಳಿದ್ದಾರೆ. ಕನ್ನಡ ಕಾವ್ಯದಲ್ಲಿ ರಗಳೆಯ ಮಟ್ಟಿನಲ್ಲಿ ಕಾವ್ಯವನ್ನು ಬರೆದವರಲ್ಲಿ ಹರಿಹರರು ಮುಖ್ಯರು ಹದಿನೈದನೇ ಶತಮಾಣದಿಂದ ೧೮ ನೇ ಶತಮಾನದವರೆಗೆ ಷಟ್ಪದಿ ಯುಗವೆಂದು ಕರೆದಿದ್ದಾರೆ. ರಾಘವಾಂಕರು ಷಟ್ಪದಿಯ ಹರಿಕಾರರೆಂದು ಗುರುತಿಸಿದ್ದಾರೆ. ನಾಲ್ಕುನೂರಾ ಎಂಬತ್ತೆಂಟು ಕವಿಗಳು ಐದುನೂರಾ ಎಂಬತ್ತೆಂಟು ಕಾವ್ಯಗಳನ್ನು ಷಟ್ಪದಿಯಲ್ಲಿ ಬರೆದಿದ್ದಾರೆಂದು ಹೇಳುತ್ತಾರೆ.

ನವೋದಯ ಕನ್ನಡ ಸಾಹಿತ್ಯ

ಸಾಹಿತ್ಯ ಸಮಾಜದ ಒಂದು ಉತ್ಪನ್ನ ಪರಿವರ್ತನೆಯ ಎಲ್ಲಾ ಆಯಾಮಗಳನ್ನು ಸಾಹಿತ್ಯ ಸಮರ್ಪಕವಾಗಿ ಕಟ್ಟಿಕೊಡುತ್ತದೆ. ಕನ್ನಡಕ್ಕೆ ಬಂದ ಹೊಸ ಸಾಹಿತ್ಯ ಪ್ರಕಾರಗಳು

೧) ಭಾವಗೀತೆ

ಭಾವಗೀತೆಯಲ್ಲಿ ದ.ರಾ ಬೇಂದ್ರೆ, ಕುವೆಂಪು, ಜಿ. ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ನರಸಿಂಹ ಸ್ವಾಮಿ ಮುಂತಾದವರು ಕೃಷಿ ಗೈದವರಲ್ಲಿ ಪ್ರಮುಖರು.

೨) ಕಥನ ಕವನ

ಎಂಬ ಪ್ರಕಾರದಲ್ಲಿ ಮಾಸ್ತಿಯವರ ನವರಾತ್ರಿ, ಕುವೆಂಪುರವರ ಬೊಮ್ಮನ ಹಳ್ಳಿಯ ಕಿಂದರ ಜೋಗಿ ಪ್ರಮುಖವಾಗಿದೆ. ನಂತರ ಸು. ರಂ. ಎಕ್ಕುಂಡಿಯವರು ಕಥನ ಕವನವನ್ನು ಮುಂದುವರಿಸಿದರು.

೩ ಮಹಾಕಾವ್ಯ

ಕುವೆಂಪುರವರ ರಾಮಾಯಣ ದರ್ಶನಂ, ವಿ.ಕೃ. ಗೋಕಾಕರ ಭಾರತ ಸಿಂಧು ರಶ್ಮಿ ಮುಂತಾದವುಗಳನ್ನು ಹೆಸರಿಸಬಹುದು.

೪) ನಾಟಕ

ನಾಟಕ ಸಾಹಿತ್ಯದಲ್ಲಿ ಸಂಸ, ಕೈಲಾಸಂ, ಲಂಕೇಶ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ ಕನ್ನಡ ನಾಟಕ ಬರೆದವರಲ್ಲಿ ಪ್ರಸಿದ್ಧರು.

೫) ಕಾದಂಬರಿ

ಗಂಗಾಧರೇಂದ್ರ ಮಡಿವಾಳೇಶ್ವರ ತುರುಮುರಿಯವರು ಕಾದಂಬರಿ ಪ್ರಕಾರವನ್ನು ತಂದವರಲ್ಲಿ ಮೊದಲಿಗರು. ನಂತರ ಗಳಗನಾಥ, ದೇವುಡು ಮುಂತಾದವರು ಕಾದಂಬರಿಯನ್ನು ಬರೆದರು. ಕನ್ನಡ ಕಾದಂಬರಿಗಳಿಗೆ ಒಂದು ಸತ್ಪ ಮತ್ತು ಸೃಜನಶೀಲತೆಯನ್ನು ತಂದು ಕೊಟ್ಟವರು ಶಿವರಾಮ ಕಾರಂತರು ಮತ್ತು ಕುವೆಂಪುರವರು, ಮುಂದೆ ಅ.ನ.ಕೃ, ಬಸವರಾಜ ಕಟ್ಟಿಮನಿ, ನಿರಂಜನ, ತ್ರಿವೇಣಿ, ಅನಂತಮೂರ್ತಿ ಮುಂತಾದವರು.

೯) ಸಣ್ಣ ಕತೆ

'ಮಾಸ್ತಿ ಕನ್ನಡದ ಆಸ್ತಿ ಎಂಬ ಅನ್ವರ್ಥಕ ಪದಕ್ಕೆ ಮುನ್ನುಡಿ ಬರೆದದ್ದೆ ಸಣ್ಣ ಕಥೆಗಳಿಂದ, ಸಣ್ಣ ಕಥೆಗಳನ್ನು ತೂಕದಿಂದ ಬಳಸಿದವರು ಲಂಕೇಶ ಮತ್ತು ಅನಂತ ಮೂರ್ತಿಗಳು. ಯಶವಂತ ಚಿತ್ತಾಲರ “ಕತೆಯಾದಳು ಹುಡುಗಿ”, ಪಂಜೆಯವರ “ಕಮಲಾಪುರದ ಹೊಟೇಲ್ ನಲ್ಲಿ ಕುವೆಂಪುರವರ “ಧನ್ವಂತರಿಯ ಚಿಕಿತ್ಸೆ” ತೇಜಸ್ವಿಯವರ “ತಬರನ ಕತೆ”, ಹೀಗೆಯೆ ಇನ್ನೂ ಬಹಳ ಲೇಖಕರನ್ನು ಗುರುತಿಸಬಹುದು.

೭) ಲಲಿತ ಪ್ರಬಂಧ 

ಲಲಿತ ಪ್ರಬಂಧವು ಒಂದು ವಿಷಯದ ಕುರಿತು ಹಿತ ಮಿತವಾದ ಬರಹ ಎ. ಎನ್. ಮೂರ್ತಿಯವರ ಹಗಲು ಗನಸುಗಳು, ತೀನಂಶ್ರೀಯವರ “ನಂಟರು, ಗೋರೂರು ವೆಂಕಟೇಶ ಐಯ್ಯಂಗಾರವರ ನಮ್ಮ ಊರಿನ ರಸಿಕರು ಮುಂತಾದ ಲೇಖಕರನ್ನು ಉದಾಹರಿಸಬಹುದು.

೮) ವಿಮರ್ಶೆ

ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಬರೆದ ಲೇಖಕರ ಪುಸ್ತಕದ ಕುರಿತು ವಿಮರ್ಶೆ ಮತ್ತೊಂದು ಪ್ರಕಾರವಾಗಿರುತ್ತದೆ.

೯) ಸಂಶೋಧನೆ

ಕನ್ನಡ ಸಾಹಿತ್ಯದ ಮತ್ತೊಂದು ಪ್ರಕಾರವೇ ಸಂಶೋಧನೆ. ಅವಿರತ ಸಂಶೋಧನೆಗೆ ಬದುಕನ್ನೆ ತೆರೆದಿಟ್ಟ ಬಹಳ ಸಂಶೋಧಕರು ಕನ್ನಡ ಸಾಹಿತ್ಯದಲ್ಲಿದ್ದಾರೆ. ಆರ್. ರಾಮಶಾಸ್ತ್ರಿ, ಶಂ.ಬಾ. ಜೋಶಿ, ಎಂ. ಶೇಷಾದ್ರಿ, ಗೋವಿಂದ ನರಸಿಂಹಾಚಾರ, ತಿ.ತಾ. ಶರ್ಮ, ಎಂ. ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ ಇನ್ನೂ ಮುಂತಾದವರಿದ್ದಾರೆ.

೧೦) ಗ್ರಂಥ ಸಂಪಾದನೆ

`ಜರ್ಮನಿಯಿಂದ ಬಂದ ಬಾಸೆಲ್ ವಿಷನ್ನಿನವರು ಬಿಡಿ ಹಾಡುಗಳನ್ನು ಪ್ರಕಟಿಸುವ ಮೂಲಕ ಗ್ರಂಥ ಸಂಪಾದನೆಯ ಕಾರ್ಯಕ್ಕೆ ತೊಡಗಿದರು. ಜೈಮಿನಿ ಭಾರತ, ಬಸವ ಪುರಾಣ, ಕುಮಾರವ್ಯಾಸ ಭಾರತ, ಮುಂತಾದವುಗಳನ್ನು ಕಲ್ಲಚ್ಚಿನಲ್ಲಿ ಮುದ್ರಿಸಿ ಪ್ರಕಟಿಸಿದರು. ೧೯೦೦ ರಲ್ಲಿ ಜಿ. ಎಸ್. ನರಸಿಂಹಾಚಾರರ 'ಆದಿಪುರಾಣ ಗ್ರಂಥ ಪ್ರಕಟಗೊಂಡಿತು. ಆಧುನಿಕ ಕನ್ನಡ ಸಾಹಿತ್ಯವನ್ನು ಪ್ರಮುಖವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

೧) ನವೋದಯ ಸಾಹಿತ್ಯ 
೨) ಪ್ರಗತಿಶೀಲ ಸಾಹಿತ್ಯ
೩) ನವ್ಯ ಸಾಹಿತ್ಯ
೪) ಬಂಡಾಯ ಸಾಹಿತ್ಯ
_________
೧) ನವೋದಯ ಸಾಹಿತ್ಯ

೧೯೨೦ ರಿಂದ ೧೯೪೨ ರವರೆಗಿನ ಸಾಹಿತ್ಯವನ್ನು ನವೋದಯದ ಕಾಲಾವಧಿಯೆಂದು ನಿರ್ಧರಿಸಲಾಗಿದೆ. ನವೋದಯ ಸಾಹಿತ್ಯದಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಮುಖ್ಯರು. ಅಂತೆಯೇ ಮಾಸ್ತಿ ವೆಂಕಟೇಶ ಐಯ್ಯಂಗಾರ, ದ.ರಾ ಬೇಂದ್ರೆ, ಶಿವರಾಮ ಕಾರಂತ, ಕುವೆಂಪು, ತಿನಂಶ್ರೀ, ಟಿ. ಪಿ. ಕೈಲಾಸಂ ಇನ್ನೂ ಮುಂತಾದವರನ್ನು ಹೆಸರಿಸಬಹುದು.

೨) ಪ್ರಗತಿಶೀಲ ಸಾಹಿತ್ಯ

ಪ್ರಗತಿಶೀಲ ಸಾಹಿತ್ಯ ರಚಿಸಿದವರಲ್ಲಿ ಅ. ನ. ಕೃಷ್ಣರಾವ್‌, ಶ್ರೀರಂಗರು, ನಿರಂಜನ, ಬಸವರಾಜ ಕಟ್ಟಿಮನಿ, ತ.ರಾ.ಸು, ಚದುರಂಗ, ಇನ್ನೂ ಬಹಳ ಲೇಖಕರನ್ನು ಗುರುತಿಸಬಹುದು.

೩) ನವ್ಯ ಸಾಹಿತ್ಯ

ನವ್ಯ ಸಾಹಿತ್ಯ ಮೊದಲು ಪ್ರಾರಂಭವಾದುದು ಪ್ರಾನ್ಸ್ ದೇಶದಲ್ಲಿ ನವ್ಯ ಸಂಪ್ರದಾಯವನ್ನು ಕನ್ನಡದಲ್ಲಿ ಮೊದಲು ಪ್ರಾರಂಭಿಸಿದವರು. ವಿ. ಕೃ. ಗೋಕಾಕರು ನವ್ಯಕ್ಕೆ ನವ ಚೈತನ್ಯ ನೀಡಿದವರು ಗೋಪಾಲಕೃಷ್ಣ ಆಡಿಗರು. ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಪಿ. ಲಂಕೇಶ ಮುಂತಾದವರನ್ನು ಗುರುತಿಸಬಹುದು ಸ್ವಿಪನ್ ಸ್ಪೆಂಡರ ನವ್ಯತೆಯ ಆರು ಲಕ್ಷಣಗಳನ್ನು ಹೇಳುತ್ತಾರೆ.

೧) ಆಧುನಿಕ ಅನುಭವದ ಸಾಕ್ಷಾತ್ಕಾರ
೨) ಸಮಾಜವನ್ನು ಪ್ರಭಾವಿತಗೊಳಿಸುವ ಸದಾಶಯ ವಿನ್ಯಾಸ 
೩) ಭೂತ ಮತ್ತು ವರ್ತಮಾನದ ಬೆಸುಗೆ
೪) .ಬದುಕನ್ನು ಹಂಚಿಕೊಳ್ಳುವ ಕಲೆಯ ಪರ್ಯಾಯ ತೆ
೬) ಪರಂಪರೆಯ ಬಗ್ಗೆ ಕ್ರಾಂತಿಕಾರಿ ಕಲ್ಪನೆ

ವಾಸ್ತವರಾಗಿ ಈ ಆರು ಅಂಶಗಳು ನವ್ಯ ಸಾಹಿತ್ಯದಲ್ಲಿ ಕಾಣಬಹುದುದಾಗಿದೆ.

೪) ಬಂಡಾಯ ಸಾಹಿತ್ಯ

ಅಂದರೆ ಪ್ರತಿಭಟನೆಗೆ ಪರ್ಯಾಯವಾಗಿರುವ ಶಬ್ದದ ಬಳಕೆ. ಎಪ್ಪತ್ತರ ದಶಕ ಪೂರ್ಣ ಚಳುವಳಿಗಳ ಕಾಲ. ದಲಿತ ಸಂಘರ್ಷ ಸಮಿತಿ, ಭೂಸಾ ಪ್ರಕರಣ, ತುರ್ತು ಪರಿಸ್ಥಿತಿ, ರೈತ ಚಳುವಳಿ, ಮಾರ್ಕ್ಸವಾದಿ ಚಳುವಳಿಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ದೇಶದೆಲ್ಲೆಡೆ ನಡೆಯುತ್ತಿದ್ದ ಕಾಲ. ಬಂಡಾಯ ಸಾಹಿತ್ಯದ ಪ್ರಮುಖರು ಬರಗೂರು ರಾಮಚಂದ್ರಪ್ಪ, ಡಿ. ಆರ್. ನಾಗರಾಜ, ಕಾಳೆಗೌಡ ನಾಗವಾರ, ಶೂದ್ರ ಶ್ರೀನಿವಾಸ, ಸಿದ್ಧಲಿಂಗಯ್ಯ ಮುಂತಾದವರು.

ಕನ್ನಡದ ಮನಸ್ಸುಗಳೇ

೨) ನಮ್ಮ ತಾಲೂಕಿನ ಕಲೆ, ಪರಿಸರದ ಕಿರು ಪರಿಚಯ
    ನಮ್ಮ ಯಲ್ಲಾಪುರ ತಾಲೂಕು ವಿಶಿಷ್ಟ ಪರಿಸರದಿಂದ ಕೂಡಿದೆ. ಬಹುತೇಕ ಭಾಗಗಳು ಮಲೆನಾಡಿಗೆ ಸೇರಿದಂತಿದ್ದರೂ ಘಟ್ಟದ ಕೆಳಗೆ ಅರಬೈಲ, ಗುಳ್ಳಾಪುರ ಇತರ ಭಾಗಗಳು ಕರಾವಳಿಗೆ ಸೇರಿಲ್ಲವಾದರೂ ಸೇರಿದಂತಿದೆ. ಇತ್ತ ಕಿರವ ಮತ್ತು ಮುಂಡಗೋಡು ಹತ್ತಿರದ ಯಲ್ಲಾಪುರದ ಪರಿಸರ ಬಯಲು ಸೀಮೆಗೆ ಸೇರಿದಂತೆ ಭಾಸವಾಗುತ್ತದೆ. ಮಲೆನಾಡಿನಲ್ಲಿ ಬಯಲು ಸೀಮೆ ಮತ್ತು ಕರಾವಳಿಯ ಭಾವ ಸ್ವಲ್ಪ ಮಟ್ಟಿಗೆ ನಮ್ಮೊಂದಿಗೆ ಕೂಡಿಕೊಂಡಿದೆ. ಇಡಗುಂದಿಯಿಂದ ಅರಬೈಲಿಗೆ ಇಳಿಯುವ ರಸ್ತೆಯ ಗುಂಟ ತೆರಳುವುದೇ ಒಂದು ರೋಚಕ ಸನ್ನಿವೇಶ. ಇಡಗುಂದಿಯಲ್ಲಿರುವ ರಾಮಲಿಂಗೇಶ್ವರ ಮತ್ತು ಮಾರುತಿ ದೇವಸ್ಥಾನಗಳು ಭಕ್ತರ ಆಶಯವನ್ನು ಪೂರೈಸುತ್ತಿವೆ. ಯಲ್ಲಾಪುರದ ಗ್ರಾಮದೇವಿ ದೇವಸ್ಥಾನ ಶಕ್ತಿ ದೇವಸ್ಥಾನ. ಮೂರು ವರ್ಷಗಳಿಗೊಮ್ಮೆ ಅಮ್ಮನವರ ಜಾತ್ರೆ ನಡೆಯುತ್ತದೆ. ಭಕ್ತರು ತಮ್ಮ ಮನದಿಂಗಿತವನ್ನು ದೇವಿಯಲ್ಲಿ ಬೇಡಿಕೊಂಡು ಧನ್ಯರಾಗುತ್ತಾರೆ.
    ಪಂಪನು ಹೇಳಿದ 'ಬನವಾಸಿ ದೇಶವಂ' ಹೇಳಿದ್ದು ಕೇವಲ ಬನವಾಸಿಗೆ ಮಾತ್ರವಲ್ಲ. ಶಿರಸಿ ಸಿದ್ದಾಪುರ, ಯಲ್ಲಾಪುರ ಒಳಗೊಂಡ ಮಲೆನಾಡಿನ ಎಲ್ಲ ಭಾಗಗಳೂ ಬರುತ್ತದೆಂದು ಭಾವಿಸಿಕೊಳ್ಳಬೇಕು. ಬಾಲಾತಿಪುರ ಸುಂದರಿ ದೇವಸ್ಥಾನ ನಾಯ್ಕನಕೆರೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಗಳು ನಿರ್ಧರಿಸಿದರು. ಆನಂತರ ಒಂದು ಅದ್ಭುತ ತ್ರಿಪುರ ಸುಂದರಿ ದೇವಸ್ಥಾನ ನಿರ್ಮಾಣವಾಯಿತು. ಸಂಸ್ಕೃತ ಪಾಠ ಶಾಲೆಯೂ ನಡೆಯುತ್ತಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ಸ್ವರ್ಣವಲ್ಲಿ ಸ್ವಾಮಿಜಿಗಳ ಆಶೀರ್ವಾದಗಳೊಂದಿಗೆ ಶ್ರೀ ಉಮಾಮಹೇಶ್ವರ ಭಾಗ್ವತ ಕಳಚೆ ಮತ್ತು ಶ್ರೀ ಎನ್. ಕೆ. ಭಟ್ಟ ಅಗ್ಗಾಸಿಕುಂಬ್ರಿ ಇವರು ತಮ್ಮ ಕಮಿಟಿಯ ಸದಸ್ಯರೊಂದಿಗೆ ಅವಿರತವಾಗಿ ದುಡಿಯುತ್ತಿದ್ದಾರೆ. ಕವಡಿಕೆರೆ ಶ್ರೀ ಕ್ಷೇತ್ರ ಕಾಡಮ್ಮ ದೇವಿ ದೇವಸ್ಥಾನ, ಕಂಪ್ಲಿಯ ಮಾರಿಕಾಂಬಾ ದೇವಸ್ಥಾನ, ಬ್ರಮರಾಂಬಾ ದೇವಾಲಯ ಭರತನಹಳ್ಳಿ, ಚಂದಗುಳಿಯ ವಿನಾಯಕ ದೇವಾಲಯವು ಗಂಟೆ ಗಣಪತಿ ದೇವಸ್ಥಾನವೆಂತಲೇ ಪ್ರಸಿದ್ಧಿ ಪಡೆದಿದೆ. ಹೀಗೆಯೇ ಭಕ್ತರು ದೇವರ ಕೃಪೆಗೆ ಪಾತ್ರರಾಗುವ ದೇವಸ್ಥಾನಗಳು, ಚರ್ಚಗಳು, ಮಸೀದಿಗಳೊಂದಿಗೆ, ಎಲ್ಲರೂ ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ.
    ಇಲ್ಲಿನ ಜಲಪಾತಗಳು ಮೈ ಮನಸ್ಸುಗಳನ್ನು ಸಂತೃಪ್ತಗೊಳಿಸುತ್ತಿದೆ. ಮಾಗೋಡು ಜಲಪಾತವು ರುದ್ರ ರಮಣೀಯ ಜಲಪಾತಯವಾಗಿದೆ. ದಬ್ಬೆಸವಲು (ಸಾತೋಡಿ ಜಲಪಾತ), ಎಮ್ಮೆ ಶೀರ್ಲ ಮತ್ತು ಮಳೆಗಾಲದಲ್ಲಿ ನೋಡಲೇ ಬೇಕಾದ ತಾರಗಾರಿನ ಅಜ್ಜಿ ಗುಂಡಿ ಜಲಪಾತ, ಅರಬೈಲ್ ಜಲಪಾತ, ಕಾನೂರು ಜಲಪಾತಗಳನ್ನು ಕಣ್ಣುಂಬಿಕೊಳ್ಳಬಹುದು. ಮಾಗೋಡಿನ ಜೇನು ಕಲ್ಲು ಗುಡ್ಡದಲ್ಲಿ ನಿಂತು ಸೂರ್ಯಾಸ್ತವನ್ನು ನೋಡುವ ಹೃದಯಸ್ಪರ್ಶಿ ದೃಶ್ಯವನ್ನು ಶಬ್ದಗಳಲ್ಲಿ ಬರೆದಿಡಲು ಸಾಧ್ಯವಿಲ್ಲ. ನಮ್ಮ ತಾಲೂಕಿನ ಬೇಡ್ತಿ ಮತ್ತು ಕಾಳಿ ನದಿಗಳು ಜೀವನದಿಗಳು, ಬೇಡಿ ನದಿಗೆ ಆಣೆಕಟ್ಟು ಕಟ್ಟುವುದರ ವಿರುದ್ಧದ ಹೋರಾಟದ ನೇತೃತ್ವವನ್ನು ಹಸಿರು ಸ್ವಾಮಿಗಳೆಂದೇ ಪ್ರಸಿದ್ಧರಾಗಿರುವ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಹಿಸಿಕೊಂಡು ಪಾದಯಾತ್ರೆಯನ್ನು ನಡೆಸಿ ದಾಖಲೆ ನಿರ್ಮಿಸಿ ಆಣೆಕಟ್ಟನ್ನು ಕಟ್ಟುವುದನ್ನು ನಿಲ್ಲಿಸಿದರು. ಕೈಗಾ ಅಣುಸ್ಥಾವರದ ವಿರುದ್ಧದ ಹೋರಾಟ ಮಾತ್ರ ಹೋರಾಟವಾಗಿಯೇ ಉಳಿಯಿತು. ಸ್ಥಾವರ ನಿರ್ಮಾಣವಾಯಿತು. ಈಗ ೫ ಮತ್ತು ೬ನೇ ಸ್ಥಾವರ ಕಟ್ಟಲು ಶುರು ಮಾಡಿದ್ದಾರೆ. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ತನ್ನು ಬೇರೆಡೆ ಕೊಂಡೊಯ್ಯುವಾಗ ಇನ್ನೂ ಹೆಚ್ಚಿನ ಅರಣ್ಯ ಹಾನಿ, ಜನರ ಗದ್ದೆ ತೋಟಗಳ ಹಾನಿ ಆಗುತ್ತದೆ. ಕೈಗಾದಿಂದ ಸುತ್ತಮುತ್ತಲಿನ ಜನರು ಆತಂಕದಿಂದಲೇ ಜೀವಿಸುವಂತಾಗಿದೆ. ಕಾಳಿನದಿಗೆ ಆಣೆಕಟ್ಟು ಕಟ್ಟುವುದನ್ನು ತಡೆಯಲು ಹೋರಾಟಗಾರರು ವಿಫಲರಾದರೂ, ಮನರ್ವಸತಿ ಮತ್ತು ಪರಿಹಾರಗಳು ಸಿಗಬೇಕಾದ ಹೋರಾಟದಲ್ಲಿ ಯಶಸ್ವಿಯಾದರು. ಯಲ್ಲಾಪುರ ತಾಲೂಕಿನಲ್ಲಿ ಎಲ್ಲ ವರ್ಗ ಜಾತಿ ಮತ ಧರ್ಮದವರಿದ್ದರೂ ಯಾವುದೇ ಗುಂಪು ಘರ್ಷಣೆ, ದೊಂಬಿ, ಗಲಾಟೆಗಳು ನಡೆಯುವುದಿಲ್ಲ. ಎಲ್ಲರೂ ಸೌಹಾರ್ದತೆಯಿಂದ ಬದುಕನ್ನು ನಡೆಸುತ್ತಿದ್ದಾರೆ.
   ಇತ್ತೀಚಿಗೆ ನೂರರಲ್ಲಿ ತೊಂಬತ್ತು ಯುವಕರು ಇಂಜಿನಿಯರಿಂಗ್, ಎಮ್‌.ಬಿ.ಬಿ.ಎಸ್. ಮುಂತಾದ ಉನ್ನತ ಶಿಕ್ಷಣ ಮುಗಿಸಿಕೊಂಡು, ಇನ್ನು ಕೆಲವರು ಉನ್ನತ ಶಿಕ್ಷಣ ಮುಗಿಸದೆಯೂ ನೌಕರಿಗಾಗಿ ಬೆಂಗಳೂರು ಮುಂಬೈ, ದಿಲ್ಲಿ ಜೊತೆಗೆ ವಿದೇಶದಲ್ಲಿಯೂ ನೆಲೆಸಿದ್ದಾರೆ. ತಂದೆ ತಾಯಿಗಳಿಗೆ ಮೂಲ ಮನೆ ಆಸ್ತಿಗಳಲ್ಲಿ ಉಳಿಯುವುದು ವೃದ್ಧಾಶ್ರಮದಲ್ಲಿ ಉಳಿದ ಭಾವ ತರುತ್ತಿದೆ. ತೋಟ ಪಟ್ಟಿಗಳ ಕೆಲಸಕ್ಕೆ ಆಳುಗಳು ಸಿಗದೇ ಪರಿತಪಿಸುವಂತಾಗಿದೆ. ಉತ್ತಮ ನೌಕರಿಯಲ್ಲಿರುವ ಯುವಕ ಯುವತಿಯರಿಗೆ ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಕೆನಡಾಗಳು ಮಾವನ ಮನೆಯಂತಾಗಿ, ಭಾರತದಲ್ಲಿ ಅಪ್ಪ ಅಥವಾ ಅಮ್ಮ ಕೈಲಾಸ ವಾಸಿಗಳಾದರೆ ಅಂತಿಮ ದರ್ಶನಕ್ಕೂ ಬರಲಾರದ ಪರಿಸ್ಥಿತಿ ನಿಮಾರ್ಣವಾಗಿದೆ. ಇದು ಆರ್ಥಿಕವಾಗಿ ಉತ್ತಮ ನಡೆಯಾದರೂ ಕೌಟುಂಬಿಕವಾಗಿ ನೆಮ್ಮದಿ ಪಡಲು ಸಾಧ್ಯವಿಲ್ಲ. ಈ ತೊಂದರೆಗೆ ಪರಿಹಾರವೆನೆಂದು ಯೋಚಿಸಿದಾಗ ನನಗೆ ದೊರೆತ ಉತ್ತರ ಈಗ ಬಹುತೇಕ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಯುವ ಜನಾಂಗ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಹಿಂದಿರುಗಿ ಕುಟುಂಬದೊಂದಿಗೆ ನಮ್ಮ ಸುಂದರ ಪರಿಸರದೊಂದಿಗೆ ಮತ್ತೊಮ್ಮೆ ನಂಟನ್ನು ಬೆಳಸಿಕೊಳ್ಳಲಿ' ಎನ್ನುವುದು ನನ್ನ ಆಶಯ, ಅದೇ ರೀತಿ ಇಲ್ಲಿಯೇ ಜೀವನ ನಡೆಸುತ್ತಿರುವ ಯುವ ಜನಾಂಗಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಸರಕಾರ ಹಮ್ಮಿಕೊಳ್ಳಬೇಕು. ಸ್ವ ಉದ್ಯೋಗಕ್ಕೆ ಹಣಕಾಸಿನ ಸಹಾಯ, ತರಬೇತಿಯ ಬೆಂಬಲ, ಕೃಷಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ, ಕೃಷಿಕರ ಕೆಲಸಗಳನ್ನು ಸುಲಭಗೊಳಿಸುವ ಉಪಕಣಗಳ ಬಗ್ಗೆ ಮಾಹಿತಿ, ರಿಯಾಯತಿ, ಪ್ರವಾಸೋದ್ಯಮದ ಅಭಿವೃದ್ಧಿ, ಇತರ ರೀತಿಗಳ ಪ್ರೋತ್ಸಾಹ ದೊರಕಿದಲ್ಲಿ ಮುಂದಿನ ಜನಾಂಗ ನಮ್ಮ ಹಳ್ಳಿ ಮತ್ತು ತಾಲೂಕುಗಳಲ್ಲೇ ಉಳಿದು ಸಣ್ಣ ಸಣ್ಣ ಊರುಗಳೂ ಹೊಂದಬಹುದು. ಪೇಟೆಗಳೂ ಅಭಿವೃದ್ಧಿ
   ಕಳಚೆಯ ಸುಂದರ ಪ್ರಕೃತಿ ಕಾಶ್ಮೀರವನ್ನು ನೆನಪಿಸುವಂತಿದೆ. ತಾಲೂಕಿನ ಕಾಶ್ಮೀರವೆಂತಲೇ ಕರೆಯಿಸಿಕೊಂಡಿರುವ ಕಳಚೆ ಪ್ರಕೃತಿಯ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ೨೩-೭-೨೦೨೧ ರ ಮಳೆಗಾಲದಲ್ಲಿ ಕಳಚೆಯಲ್ಲಾಗಿರುವ ಪ್ರಕೃತಿ ವಿಕೋಪದ ದುರಂತ ಮರೆಯಲಾರದ ಘಟನೆ. ಕೊಡಗಿನಲ್ಲಿಯೋ ಇನ್ನೆಲ್ಲೋ ಆಗಿರುವ ದುರಂತವನ್ನು ಟಿ.ವಿ. ಯಲ್ಲಿ ನೋಡುತ್ತಿದ್ದೆವು. ಆದರೆ ಪ್ರತ್ಯಕ್ಷ ಕಂಡ ಕಳಚೆಯಲ್ಲಾಗಿರುವ ಭೂಕುಸಿತದ ಭೀಕರ ಪರಿಸ್ಥಿತಿ ಈಗಲೂ ಕನಸಿನಲ್ಲಿ ಬಂದಂತೆ ಭಾಸವಾಗುತ್ತದೆ. ಆ ನಂತರದ ದಿನಗಳಲ್ಲಿ ಕೆಲವರು ಯಲ್ಲಾಪುರದಲ್ಲಿ ಮನೆ ಮಾಡಿದರು. ಇನ್ನು ಕೆಲವರು ಬೇರೆ ಊರಿನಲ್ಲಿ ಒಂದೆರಡು ಎಕರೆ ಆಸ್ತಿ ಖರೀದಿಸಿ ಮನೆ ಮಾಡಿ ಕೊಂಡಿದ್ದಾರೆ. ಮುಂದೆ ಸಹ ಮಳೆಗಾಲದಲ್ಲಿ ಭೂಕುಸಿತ ಆಗಲಾರದೆಂದು ಭರವಸೆ ಇಲ್ಲ. ಮಳೆಗಾಲ ಬಂದ ಕೊಡಲೇ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.ಊರಿನಲ್ಲಿ ಇರುವವರು ಮಳೆಗಾಲ ಕಳೆಯಿತೆಂದರೆ ನಿಟ್ಟುಸಿರು ಬಿಡುತ್ತಾರೆ. ಇದಕ್ಕೆ ಪರಿಹಾರವನ್ನು ಸರಕಾರ ಮಾತ್ರ ಕೊಡಲು ಸಾಧ್ಯವಿದೆ. ಇವರಿಗೆ ಯೋಗ್ಯ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿಕೊಡಬೇಕಾಗಿ ಈ ಸಮ್ಮೇಳನದ ಮೂಲಕ ಸರಕಾರವನ್ನು ಆಗ್ರಹಿಸುತ್ತೇನೆ.

ಆತ್ಮೀಯ ಕನ್ನಡಿಗರೇ

೩ ತಾಲೂಕಿನ ಸಾಹಿತ್ಯದ ಇತಿಹಾಸ ಮತ್ತು ಪ್ರಸ್ತುತ

ಯಲ್ಲಾಪುರ ತಾಲೂಕಿನ ಕನ್ನಡ ಸಾಹಿತ್ಯ ಚೇತನ ಅಪಾರವಾಗಿದೆ. ಹಿಂದಿನ ಈಗಿನ ಸಾಹಿತ್ಯ ಸಾಧಕರನ್ನು ನಾನಿಲ್ಲಿ ಪರಿಚಯಿಸುವುದು, ಸ್ಮರಿಸುವುದು ನನ್ನ ಕರ್ತವ್ಯವಾದರು, ಎಲ್ಲರನ್ನೂ ನೆನಪಿಸಿಕೊಳ್ಳಲು ದಾಖಲಿಸಲು ಸಾಧ್ಯವಾಗಲಿಕ್ಕಿಲ್ಲ. ಅಲ್ಲದೇ ಈ ಹಿಂದಿನ ಸಮ್ಮೇಳನಾಧ್ಯಕ್ಷರುಗಳು ತಮ್ಮ ತಮ್ಮ ಭಾಷಣಗಳಲ್ಲಿ ತಾಲೂಕಿನ ಎಲ್ಲರನ್ನೂ ಪ್ರಸ್ತಾಪಿಸಿರುವುದರಿಂದ ಮತ್ತೆ ಮನರಾವರ್ತನೆ ಆಣಬಹುದೇನೋ. ಎಲ್ಲಾ ಸಾಹಿತಿ ಲೇಖಕರನ್ನು ಉಲ್ಲೇಖಿಸಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಇರಲಿ, ಕೃಷಿ ವಿಜ್ಞಾನ, ರಾಜಕೀಯಕ್ಕೆ ಪ್ರತಿಭೆ ಬೇಕಾಗುವಂತೆ ಸಾಹಿತ್ಯಕ್ಕೂ ಆಂತರಿಕವಾಗಿ ಪ್ರತಿಭೆ ಬೇಕಾಗುತ್ತದೆ. ಅಂತಹ ಕನ್ನಡ ಸಾಹಿತ್ಯ ಪ್ರತಿಭೆ ನಮ್ಮ ತಾಲೂಕಿನಾದ್ಯಂತ ತುಂಬಿಕೊಂಡಿದೆ.

ಕೃತಿಗಳನ್ನು ರಚಿಸಿದವರಲ್ಲಿ ದಿ|| ಗಣಪತಿ ರಾಮಕೃಷ್ಣ ಭಟ್ಟ, ದಿ|| ವಿದ್ವಾನ ಗೋವಿಂದ ಭಟ್ಟ ಹಿತ್ತಳ್ಳಿ ದಿ|| ರಾ.ಭ. ಹಾಸಣಗಿ, ದಿ|| ಸೂರ್ಯನಾರಾಯಣ ಭಟ್ಟ ಹಿತ್ತಗದ್ದೆ, ನಾಯ್ಕನಕೆರೆ ಶಿವಾನಂದ ಯೋಗಿ ಇವರುಗಳು ಮುಖ್ಯರು. ೧೯೯೨-೯೩ ರಲ್ಲಿ ಕವನ ಸಂಕಲನವೊಂದನ್ನು ಶಿವರಾಮ ಮುಳಕನಜಡ್ಡಿಯವರು ಕುಸುಮಾಶ್ರಿತ ಎಂಬ ಕಾವ್ಯನಾಮದಿಂದ ಪ್ರಕಟಿಸಿ ನಮ್ಮ ತಾಲೂಕಿನಲ್ಲಿ ಕವನ ಸಂಕಲನ ಹೊರ ತಂದವರಲ್ಲಿ ಮೊದಲಿಗರು, ತಾಲೂಕಿನ ಕನ್ನಡ ಸಾಹಿತ್ಯದ ವಿಷಯ ಬಂದಾಗ ದಿ. ನಾ.ಸು. ಭರತನಹಳ್ಳಿಯವರು ಪ್ರಮುಖರು, ಕನ್ನಡ ಸಾಹಿತ್ಯಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತರು, ಕರ್ನಾಟಕದ ಯಾವುದೇ ತಾಲೂಕಿನಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡವಿಲ್ಲದಿರುವ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಸ್ವಂತ ಜಾಗವನ್ನು ಸರಕಾರದಿಂದ ಒದಗಿಸಿಕೊಂಡು, ಕಟ್ಟಡವನ್ನು ನಿರ್ಮಿಸಿದ ಕೀರ್ತಿ ನಾಸುರವರಿಗೆ ಸಲ್ಲಬೇಕು. ಕಥಾಸಂಕಲನ ಮತ್ತು ಕಾದಂಬರಿಯನ್ನು ಪ್ರಕಟಿಸಿದವರಲ್ಲಿ (೧೯೭೮-೭೯) ಪ್ರಥಮರು, ನಂತರ ಅವರ ನಾಟಕ, ಜೀವನಚರಿತೆ, ಕವನ ಸಂಗ್ರಹ, ಮಕ್ಕಳ ಸಾಹಿತ್ಯ ಸೇರಿ ೩೦ ಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ, ದಿ ಪ. ಗ. ಭಟ್ಟ ಗುಡ್ಡೆಯವರು ಪ್ರಸಿದ್ಧ ಕವಿಗಳಾಗಿದ್ದರು, ಖ್ಯಾತ ಜ್ಯೋತಿಷಿಗಳು, ಆದರೆ ಅನಿರೀಕ್ಷಿತವಾಗಿ ಕೈಲಾಸವಾಸಿಗಳಾಗಿರುವುದು ದು:ಖದ ಸಂಗತಿ. ವನರಾಗ ಶರ್ಮ ವಜ್ರಳ್ಳಿ ಇವರು ಕಥೆ, ಕವನ ಮಕ್ಕಳ ಸಾಹಿತ್ಯ ಮಧುರ ರಾಮಾಯಣ ಎಂಬ ಕೃತಿಗಳನ್ನು ಪಕಟಿಸಿದವರು. ಇದೇ ರೀತಿ ನನ್ನ ಬಗ್ಗೆ ಹೇಳಬೇಕೆಂದರೆ (ಟಿ, ವಿ. ಕೋಮಾರ ಬಾಗಿನಕಟ್ಟಾ) ಕೃಷಿಯಲ್ಲಿ ನಿರತನಾಗಿರುವ ನಾನು ಸಾಹಿತ್ಯದಲ್ಲಿ ಆಸಕ್ತಿ ಹೊಂದಿ ಒಟ್ಟು ೨೪ ಕೃತಿಗಳನ್ನು ಪ್ರಕಟಿಸಿದ್ದೇನೆ. ಬದುಕು ಎಂಬ ಕವನ ಸಂಕಲನ ಸೇರಿ ೪ ಕೃತಿಗಳು ಪ್ರಕಾಶನಗೊಳ್ಳಲು ಎದುರು ನೋಡುತ್ತಿವೆ. ಒಟ್ಟು ಬಿಡಿ ನಾಟಕಗಳು ೧೦೦ ಕ್ಕಿಂತ ಹೆಚ್ಚು ಪ್ರಕಾಶನಗೊಂಡಿವೆ. ಸಣ್ಣಕತೆ ಕವನಗಳು ಬೆಳಕು ಕಂಡಿವೆ. ಸ್ಮರಣ ಸಂಚಿಕೆಗಳಲ್ಲಿ ಲೇಖನಗಳು ಸ್ಥಾನ ಪಡೆದಿವೆ.
    ವಿದ್ಯಾ ಭರತನಹಳ್ಳಿಯವರು ಪತ್ರಕರ್ತೆಯಾಗಿ ಕವನ ಸಂಕಲನವನ್ನು ಹೋರತಂದಿರುತ್ತಾರೆ. ಈಗ ಬೆಂಗಳೂರು ನಿವಾಸಿಯಾಗಿದ್ದಾರೆ. ಡಾ|| ಗೀತಾ ವಸಂತ ಹಾಸಣಗಿಯವರು ಕವನ ಸಂಕಲನ ಮತ್ತು ಕಥೆಗಳನ್ನು ಬರೆದಿರುತ್ತಾರೆ. ಸಂಶೋಧನಾ ಗ್ರಂಥ ಬರೆದ ಡಾ|| ಸೂರ್ಯನಾರಾಯನ ನಾಗೇಂದ್ರ ಭಟ್ಟ ಹಿತ್ತಳ್ಳಿ, ವೈಚಾರಿಕ ಲೇಖಕರಾದ ಡಾ ॥ ರಾಮಚಂದ್ರ ಭಟ್ಟ ಕೋಟೆಮನೆ, ಜ್ಯೋತಿಷ್ಯ ಪ್ರಾಚ್ಚಾರಾದ ತಿಮ್ಮಣ್ಣ ಭಟ್ಟ ಬಾಲಿಗದ್ದೆ, ನಾಗೇಂದ್ರ ಭಟ್ಟ ಹಿತ್ತಳ್ಳಿ ಇವರೆಲ್ಲರೂ ಈ ತಾಲೂಕಿನ ವಿದ್ವನ್ಮಣಿಗಳು, ಪ್ರೋ ಟಿ. ಜಿ. ಭಟ್ಟ ಹಾಸಣಗಿಯವರು ಕವನ ಸಂಕಲನ ವೈಚಾರಿಕ ಲೇಖನ ವಿಮರ್ಶೆಗಳನ್ನು ಬರೆದಿದ್ದರು. ಇವರು ಕುಮಟಾ ನಿವಾಸಿಗಳಾಗಿದ್ದಾರೆ. ನಮ್ಮ ತಾಲೂಕಿನ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಅವರು ಸಣ್ಣಕತೆ ಕಾದಂಬರಿಗಳನ್ನು ಬರೆಯುತ್ತ ಪ್ರಶಸ್ತಿಗಳನ್ನು ಪಡೆದು ಕುಮಟಾದಲ್ಲಿ ವಾಸಿಸುತ್ತಿದ್ದಾರೆ. ನಮ್ಮ ತಾಲೂಕಿನ ಸಂಜಾತರಾದ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪಡೆದು ಸಿದ್ಧಾಪುರ ತಾಲೂಕಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ವಿಷ್ಣು ಕಾಮತ ಕಿರವತ್ತಿ, ಮಂಜುನಾಥ ಶೇವಾರ, ಮಂಜುನಾಥ ಬೀರಗದ್ದೆ (ಬೆಂಗಳೂರು), ಕುಸುಮಾ ಹೆಗಡೆ, ಗ.ರಾ.ಭ. ಮಂಚಿಕೇರಿಯ, ಚಂದ್ರಕಾಂತ ಮೊಕಳೆ, ಎಚ್‌. ಆರ್. ಅಮರನಾಥ ಇವರುಗಳು ಲೇಖನದಲ್ಲಿ ಹೆಸರು ಮಾಡಿದವರು. ಕಳಚೆಯ ಬೆನವೆ' ಎಂಬ ಕಾವ್ಯನಾಮದಿಂದ ಕವನ ಸಂಕಲನ ಮತ್ತು ಕಳಚೆ ಇತಿಹಾಸದ ಮೇಲೆ ಮಸ್ತಕವನ್ನು ಹೊರ ತಂದಿರುತ್ತಾರೆ. ಕೆ.ವಿ. ಅನುರಾಧರವರು ಕಾದಂಬರಿಯನ್ನು ಬರೆಯುವದರ ಜೊತೆ ಪತ್ರಕರ್ತರೂ ಆಗಿದ್ದಾರೆ. ಡಾ|| ಸರಸ್ವತಿ ಕಳಸದ ಅವರು ಉತ್ತಮ ಕವಿಗಳು, ಶೈಲಜಾ ಗೋರನ್‌ ಮನೆಯವರು ಕವನಗಳನ್ನು ಬರೆಯುತ್ತ ದೂರದರ್ಶನದ ವರದಿಗಾರ್ತಿ, ದಿ|| ಮೋಹನ ಕುರ್ಡಗಿಯವರು ಬಂಡಾಯ ಕವಿಗಳು, ಎಲ್ಲರೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನಮ್ಮನ್ನಗಲಿರುವುದು ನೋವನ್ನುಂಟು ಮಾಡಿದೆ. ಕವಿ ಗಣಪತಿ ಬಾಳೆಗದ್ದೆ, ಚುಟುಕು ಕವಿ ಡಿ. ಜಿ. ಭಟ್ಟ ದುಂಡಿ, ಪದ್ಮಾ ಹಿರೇಸರ, ಸುಬ್ರಹ್ಮಣ್ಯ ಹಿರೇಸರ, ಸತ್ಯನಾರಾಯಣ ಚಿಮ್ಮನಹಳ್ಳಿ, ಶ್ರೀಪಾದ ಭಟ್ಟ ಶೀಗೆಪಾಲ ಇವರೆಲ್ಲರನ್ನೂ ನೆನಪಿಸಿ ಕೊಳ್ಳಲೇಬೇಕು.
    ಶ್ರೀರಂಗ ಕಟ್ಟಿಯವರು ಪತ್ರಕರ್ತರಾಗಿಯೂ ಬದುಕು ಪಯಣದ ಬುತ್ತಿ ಮತ್ತು ಕಬೀರ ಕಂಡಂತೆ' ಎಂಬ ಎರಡು ಉತ್ತಮ ಕೃತಿಗಳನ್ನು ಹೊರತಂದಿರುತ್ತಾರೆ. ಆರ್. ಎಸ್‌. ಭಟ್ಟ ಕಳಚೆ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಗಂಗಾಧರ ದಬ್ಬೆಸಾಲ ಒಂದು ಕಿರು ಕಾದಂಬರಿ ಮತ್ತು ಕವನ ಸಂಕಲನವನ್ನು ಕೊಟ್ಟಿರುತ್ತಾರೆ. ಕಾವ್ಯದಲ್ಲಿ ಪ್ರತಿಭಾವಂತರಾದ ಗಣೇಶ ಪಿ. ನಾಡೋರ, ಕ.ರಾ.ನಾ, ಶಿವಲೀಲಾ ಹುಣಸಗಿ, ಅಂಬರೀಷ ಮಲ್ಮನೆ, ನಾಗೇಶ ಅಣ್ವೇಕರ, ಕೃಷ್ಣ ಭಟ್ಟ ನಾಯ್ಕನಕೆರೆ, ನಾಗೇಶ ನಾಯ್ಕ, ದತ್ತಾತ್ರಯ ಕಣ್ಣಿಪಾಲ, ಕೆ. ವಿ. ಆಚಾರಿ, ಎ. ಎಸ್. ಭಟ್ಟ ಮುಂತಾದವರು ಕಾವ್ಯ ಸೇವೆಯನ್ನು ಮನಸ್ಸು ತುಂಬಿ ಮಾಡುತ್ತಿದ್ದಾರೆ. ಮುಂಡಗೋಡಿ
   ಸಾಹಿತ್ಯ ಬರಹಗಳ ಜೊತೆ ಜೊತೆಗೆ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ದಿ|| ಸತ್ಯನಾರಾಯಣ ಹೆಗಡೆ ಹಾಸ್ಪುರವರು ಪತ್ರಿಕೆಯ ಕಚೇರಿಯಲ್ಲಿ ದುಡಿಯುತ್ತಿರುವ ಸಂದರ್ಭದಲ್ಲಿ ನಮ್ಮನ್ನಗಲಿರುವುದು ನೋವಿನ ಸಂಗತಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪತ್ರಿಕಾ ವರದಿಗಾರರಾಗಿಯೂ ಸೇವೆ ಸಲ್ಲಿಸಿದ ದಿ|| ರಾಮಕೃಷ್ಣ ಭಟ್ಟ ಬಾಳ್ಳಲ್ ದೈವಾಧೀನರಾಗಿರುವುದು ಖೇದದ ವಿಷಯ. ಬೀರಣ್ಣ ನಾಯಕ ಮೊಗಟಾರವರು ಈ ನೆಲದ ಸ್ಪೂರ್ತಿದಾಯಕ ವರದಿಗಾರರಾಗಿ ಅಂಕಣ ಬರಹಗಾರರಾಗಿ ಹೆಸರುಗಳಿಸಿದ್ದಾರೆ. ಖಚಿತ ವರದಿಗಾರರಾಗಿ ಸುಬ್ರಾಯ ಬಿದ್ರೆಮನೆ ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ತನಿಖಾ ವರದಿಗಾರ ನರಸಿಂಹ ಸಾತೋಡಿ, ನಿಷ್ಪಕ್ಷ ವರದಿಗಾರ ನಾಗರಾಜ ಮದ್ಗುಣಿ, ತೂಕದ ಬರಹಗಳ ವರದಿಗಾರ ಶ್ರೀಧರ ಅಣಲಗಾರ, ವರದಿಗಾರ ಕೆ. ಎಸ್. ಭಟ್ಟ ಆನಗೋಡು, ದತ್ತಾತ್ರಯ ಕಣ್ಣಿಪಾಲ, ಜಯರಾಜ ಗೋವಿ, ಪ್ರಭಾವತಿ ಗೋವಿ, ಆರ್. ಶ್ರೀಪತಿ, ಜಿ. ಎನ್. ಭಟ್ಟ ತಟ್ಟೆಗದ್ದೆ - ಜಗದೀಶ ನಾಯ್ಕ, ನಾಗೇಶ, ವಿಶ್ವೇಶ್ವರ ಗಾಂವ್ಯಾರ, ವಿಜಯ್‌ ಕುಮಾರ ನಾಯ್ಕ ಮುಂತಾದವರೆಲ್ಲರೂ ಯಲ್ಲಾಪುರದ ಮಣ್ಣಿನ ಕುಡಿಗಳಾಗಿ ಪತ್ರಿಕಾ ಪ್ರಪಂಚದಲ್ಲಿ ಮಿಂಚುತ್ತಿದ್ದಾರೆ. ಪರಮೇಶ್ವರ ಗುಂಟಲ್ ಬೆಂಗಳೂರು ಸೇರಿ ಕನ್ನಡ ಕಲರ್ಸ ಟಿ.ವಿ.ಯ ಮುಖ್ಯಸ್ಥರು, ಎಸ್ತಾರ ಟಿ.ವಿ.ಯ ಮುಖ್ಯಸ್ಥರಾಗಿರುವ ಹರಿಪ್ರಕಾಶ ಕೋಣೆಮನೆ ನಮ್ಮ ತಾಲೂಕಿನ ಹೆಮ್ಮೆಯ ಪ್ರತಿಭೆ, ತಿಮ್ಮಪ್ಪ ಭಟ್ಟ ದುಂಡಿ ಮಂಚಿಕೇರಿಯಿಂದ ಬೆಂಗಳೂರು ಸೇರಿ ಪತ್ರಿಕಾ ಸಂಪಾದಕರಾಗಿ ಹೆಸರು ಗಳಿಸಿದ್ದಾರೆ.

ಸಾಗರದಂತಿರುವ ನಮ್ಮ ಕನ್ನಡ ಸಾಹಿತ್ಯವನ್ನು ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಹಿಡಿಯಷ್ಟಾದರೂ ಕಾಣುವ ಪ್ರಯತ್ನ ನಮ್ಮದು, ಪ್ರಮೋದ ಹೆಗಡೆಯವರು ಯಲ್ಲಾಪುರ ತಾಲೂಕಿನ ಸಾಂಸ್ಕೃತಿಕ ಕ್ಷೇತ್ರದ ಭೀಷ್ಮರೆಂದರೆ ಸರಿಯಾದ ಭಾಷ್ಯವಾದಿತು. ಕಳೆದ ೩೬ ವರ್ಷಗಳಿಂದ ಏಳುದಿವಸ ಸಾಹಿತ್ಯ ಸಂಗೀತ ಮತ್ತು ಯಕ್ಷಗಾನದ ಸಪ್ತಾಹವನ್ನು ನಡೆಸುತ್ತ ಬಂದಿದ್ದಾರೆ. ಸಾಹಿತ್ಯ ಓದುಗರಿಗೆ ನೆರವಾಗುವ ದೃಷ್ಠಿಯಿಂದ ಮೂವತ್ತು ಸಾವಿರ ಪುಸ್ತಕಗಳ ಮೌನ ಗ್ರಂಥಾಲಯವನ್ನು ತೆರೆದು ಬಹಳ ವರ್ಷಗಳವರೆಗೆ ನಡೆಸಿಕೊಂಡು ಬಂದಿದ್ದಾರೆ. ತೇಲಂಗಾರಿನಲ್ಲಿ ಮೈತ್ರಿ ಕಲಾ ಬಳಗ ೨೫ ವರ್ಷಗಳಿಂದ ಜಿ. ಎಸ್. ಗಾಂಸ್ಕಾರ ಕಂಚಿಪಾಲ ಮತ್ತು ಇವರ ಬಳಗದವರು ಯಕ್ಷಗಾನ ಸಪ್ತಾಹ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮಂಚಿಕೇರಿಯಲ್ಲಿ ರಾಮಕೃಷ್ಣ ಭಟ್ಟ ದುಂಡಿಯವರ ನೇತೃತ್ವದಲ್ಲಿ ರಂಗ ನಾಟಕಗಳು ಮತ್ತು ಸಾಹಿತ್ಯ ಚಟುವಟಿಕೆಗಳು ಸದಾ ಕಾಲದಲ್ಲೂ ನಡೆಯುತ್ತಿರುತ್ತದೆ. ಯಲ್ಲಾಪುರದ ಸಹ್ಯಾದ್ರಿ, ರಂಗ, ಸಂಪದ, ಚವತ್ತಿಯ ರಂಗಚೇತನ ಕೂಟಗಳು ನಾಟಕಗಳನ್ನು ರಂಗ ಪ್ರಯೋಗಗೊಳಿಸುತ್ತಿವೆ. ಕೊಡಗದ್ದೆ, ಬರಬಳ್ಳಿ, ಮಲವಳ್ಳಿಗಳಲ್ಲಿ ನಾಟಕ ರಂಗಕ್ಕೆ ಬೇಕಾದ ಎಲ್ಲಾ ಪರಿಕರಗಳೂ ಇದ್ದವು. ತಾಲೂಕಿನ ಬಹುತೇಕ ಎಲ್ಲ ಊರುಗಳ ಯುವಕ ಮಂಡಳಗಳು ನಾಟಕ ಮತ್ತು ಯಕ್ಷಾಗಾನಗಳನ್ನು ಪ್ರತಿ ವರ್ಷ ಪ್ರದರ್ಶಿಸುತ್ತಿದ್ದವು. ನಮ್ಮ ತಾಲೂಕು ಯಕ್ಷಗಾನ ಮತ್ತು ನಾಟಕ ರಂಗ ಕ್ರಿಯೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ.

ದಿ|| ಗಜಾನನ ಭಟ್ಟ ಇಡಗುಂದಿ ಯಕ್ಷಗಾನ ಪಾತ್ರಗಳಿಂದ ಬಹು ದೊಡ್ಡ ಕಲಾವಿದರಾಗಿದ್ದರು. ಎಮ್. ಎನ್. ಹೆಗಡೆ ಹಳವಳ್ಳಿ ಜಿಲ್ಲೆಯಲ್ಲಿಯೇ ಹೆಸರುಗೊಂಡ ಅರ್ಥದಾರಿಗಳು. ಪ್ರಸಿದ್ದ ಅರ್ಥದಾರಿ ನಾರಾಯಣ ಬಾಳಂತನಪಾಲರವರು, ಡಾ|| ಡಿ. ಕೆ. ಗಾಂವ್ಯಾರ ಉತ್ತಮ ಅರ್ಥದಾರಿಗಳು, ಯಾವ ವಿಷಯದ ಬಗ್ಗೆಯೂ ನಿರರ್ಗಳವಾಗಿ ಮಾತನಾಡಬಲ್ಲರು. ಅನಂತ ವೈದ್ಯರು ಅರ್ಥದಾರಿಗಳು ಮತ್ತು ಅಂಕಣ ಬರಹಗಾರರು. ಸಣ್ಣಣ್ಣ ಭಾಗ್ವತರು, ಕುಪ್ಪನಮನೆ ಭಾಗ್ವತರು, ತಾರಿಕುಂಟೆ ಭಾಗ್ಯತರು. ಕೋಗಿಲೆ ಕಂಠದ ದಕ್ಷಿಣೋತ್ತರಕನ್ನಡದ ದಿಗ್ಗಜರಾದ ವಿದ್ವಾನ ಗಣಪತಿ ಭಟ್ಟ ಮೊಟ್ಟೆಗದ್ದೆ, ಮೃದಂಗ ವಾದಕರಾದ ಶಂಕರ ಶಿಸ್ತಮುಡಿ, ನರಸಿಂಹ ಹಂಡ್ರಮನೆ, ಅನಂತ ದಂತಳಿಗೆ, ಗಣಪತಿ ಕವಾಳೆ, ಮಿಂಚಿನ ನೃತ್ಯದ ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಮಂಜುನಾಥ ಮೂಲೆಮನೆ, ಸ್ತ್ರೀಪಾತ್ರಧಾರಿ ಸದಾಶಿವ ಮಳವಳ್ಳಿ ಮೊದಲಾದವರು ರಂಗದಲ್ಲಿ ಮಿಂಚುತ್ತಿದ್ದಾರೆ.
  ಹಿಂದುಸ್ತಾನಿ ಸಂಗೀತದಲ್ಲಿ ಅಂತರಾಷ್ಟ್ರೀಯ ಖ್ಯಾತಿವೆತ್ತ ಗಣಪತಿ ಭಟ್ಟ ಹಾಸಣಗಿ, ಶ್ರೀಪಾದ ಭಟ್ಟ ಕಂಪ್ಲಿ, ಹಾಡಿನಿಂದಲೇ ಮೋಡಿ ಮಾಡುವ ವಾಣಿ ಹರ್ಡಿಕರ, ವಿದ್ವಾನ ದತ್ತಾತ್ರಯ ಚಿಟ್ಟೆಪಾಲ, ಪಸನ್ನ ವೈದ್ಯ, ಎನ್.ಆಯ್. ಕೋಮಾರ, ಲತಾ ಉಡುಗುಣಿ, ವಿಶ್ಲೇಶ್ವರ, ಕವಡಿಕೆರೆ, ಗುರುಮೂರ್ತಿ ವೈದ್ಯ, ನಮ್ಮನ್ನಗಲಿದ ಮಂಜುನಾಥ ಕಲ್ಮನೆಯವರನ್ನು ನೆನೆಯುತ್ತೇನೆ. ಸತೀಶ ಯಲ್ಲಾಪುರ ಪ್ರಸಿದ್ಧ ಚಿತ್ರ ಕಲಾವಿದರು, ರಾಮಕೃಷ್ಣ ಸಿದ್ರಪಾಲ, ವಿನಾಯಕ ಹಳೆಮನೆ, ನಾಗೇಂದ್ರ ಯಲ್ಲಾಪುರ, ಭರತನಾಟ್ಯ ಕೋವಿದೆ ಸುಮಾ ತೊಂಡೆಕೆರೆ, ವಿಜಯಲಕ್ಷ್ಮೀ ಕಂಪ್ಲಿ, ಸಹನಾ ಭಟ್ಟ, ಉಮಾ ಹೆಬ್ಬಾರ, ಅಶ್ವಿನಿ ಭಟ್ಟ ಹಾಸಣಗಿ ಇವರುಗಳ ಸಾಧನೆ ಅಪೂರ್ವ ಅಭಿವೃದ್ಧಿಯ ಕೆಲಸಗಳು ಸಾಧ್ಯವಾಗುವುದು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರ ಸಹಕಾರದಿಂದ, ನಮ್ಮ ತಾಲೂಕಿನಲ್ಲಿ ಈ ಕ್ಷೇತ್ರಗಲಿಗೆ ಅಪಾರ ಕಾಣಿಕೆ ನೀಡಿ ಅವಿರತ ದುಡಿದ ಮತ್ತು ದುಡಿಯುತ್ತಿರುವ ಅನೇಕ ಗಣ್ಯರು ಇರುವುದು ನಮ್ಮ ಅದೃಷ್ಟ ದಿ|| ವಿ. ಎನ್ ಭಟ್ಟ ಉಪಾದ್ಯ ಕಳಚೆ ಇವರು ರಾಜಕೀಯ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ತಾಲೂಕಿನಲ್ಲಿ ಮುನ್ನಡೆಯಲ್ಲಿದ್ದವರು. ದಿ|| ಉಮೇಶ ಭಟ್ಟ ಯಲ್ಲಾಪುರದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ವೈ.ಟಿ.ಎಸ್ ಶಿಕ್ಷಣ ಸಂಸ್ಥೆಯ ಹುಟ್ಟಿಗೆ ಕಾರಣರಾದ ದಿ|| ಬಿ. ಬಿ. ಭಟ್ಟ, ದಿ|| ನಾಗೇಶ ಶಾನಭಾಗ, ದಿ ಲಕ್ಷ್ಮಣ ಶಾನಭಾಗ ಇವರುಗಳು ಸಾಮಾಜಿಕವಾಗಿ ತಮ್ಮ ಸೇವೆಯನ್ನು ಸಲ್ಲಿಸಿದವರು. ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಲ್ಲಾಪುರದಲ್ಲಿ ನೆರವೇರಿಸಿದ ಶಿಕ್ಷಣ ಪ್ರೇಮಿ ದಿ|| ಎನ್. ಎಸ್. ಹೆಗಡೆ ಕುಂದರಗಿಯವರು ಕೈಲಾಸವಾಸಿಗಳಾಗಿರುವುದು ತುಂಬಿಬಾರದ ನಷ್ಟ. ದಿ| ಆರ್. ಆರ್. ಹೆಗಡೆ ಶೀಗೆಮನೆ, ದಿ|| ಗಜಾನನ ಭಟ್ಟ ಯಲ್ಲಾಪುರ ಇವರೆಲ್ಲರ ಸಾಮಾಜಿಕ ಕಾರ್ಯಗಳು ಅಪಾರ,

ಯಲ್ಲಾಪುರ ತಾಲೂಕಿನಿಂದ ಮೊದಲ ಬಾರಿಗೆ ಉಸ್ತುವಾರಿ ಮಂತ್ರಿಗಳಾಗಿ, ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಶ್ರೀ ಎಸ್. ಎಮ್. ಹೆಬ್ಬಾರವರು ಈ ನೆಲದ ಕೀರ್ತಿ ಭಾಜನರು, ಟಿ.ಎಮ್.ಎಸ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಭಿವೃದ್ಧಿಗೂ ಕಾರಣರಾದ ಶ್ರೀ ಆರ್. ಎನ್. ಹೆಗಡೆ ಗೋರ್ಸಗದ್ದೆ ಸಹಕಾರಿ ರತ್ನ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡವರು. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ದಿನವಿಡಿ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ಶ್ರೀ ಉಮಾಮಹೇಶ್ವರ ಭಾಗ್ವತ ಕಳಚೆ ಅಪರೂಪದ ಆಪದ್ಭಾಂದವರು. ಸ್ವರ್ಣವಲ್ಲಿ ಸಂಸ್ಥಾನದ ಆಡಳಿತಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಎಸ್.ಎನ್.ಗಾಂವ್ಯಾರ, ಬೆಳ್ಳಿಪಾಲ ಆದರ್ಶದ ವ್ಯಕ್ತಿ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ನಾರಾಯಣ ನಾಯ್ಕ ಮತ್ತು ನೌಕರರ ಸಂಘದ ಅಧ್ಯಕ್ಷರಾಗಿರುವ ಪ್ರಕಾಶ ನಾಯ್ಕ ಜನವೀಯ ವ್ಯಕ್ತಿಗಳು, ಟಿ.ಎಮ್.ಎಸ್ ಅಧ್ಯಕ್ಷರಾಗಿರುವ ಎನ್. ಕೆ. ಭಟ್ಟ ಅಗ್ಗಾಶಿಕುಂಬ್ರಿ, ಪಿ. ಜಿ. ಭಟ್ಟ ವಡ್ರಮನೆ, ನರಸಿಂಹಮೂರ್ತಿ ಕೋಣೆಮನೆ, ಆರ್.ಜೆ, ಹೆಗಡೆ ಬೆದೆಹಕ್ಲು, ಗಣಪತಿ ಬೊಳಗುಡ್ಡೆ, ಗಜಾನನ ಗಾಂವ್ಕರ ಮಲವಳ್ಳಿ, ಸುಬ್ಬಯ್ಯ ದೋಗಳೆ, ಅನಂತ ನಾಗರಜಡ್ಡಿ, ಟಿ. ಎನ್‌. ಭಟ್ಟ ನಡಿಗೆಮನೆ, ಡಿ. ಎನ್. ಗಾಂವರ ಎಮ್. ಜಿ. ಭಟ್ಟ ಸುಂಕದಗುಂಡಿ, ಜಿ. ಎನ್. ಹೆಗಡೆ ಹಿರೇಸರ, ಗಣಪತಿ ಮಾನಿಗದ್ದೆ, ಸುಬ್ರಾಯ ಭಟ್ಟ ಬೋಳ್ಮನೆ, ಆರ್. ವಿ. ಹೆಗಡೆ ಕನೇನಹಳ್ಳಿ, ಎನ್. ಕೆ. ಭಟ್ಟ ಮೆಣಸುಪಾಲ, ವಿಶ್ವನಾಥ ಭಟ್ಟ ಎಮ್.ಕೆ.ಬಿ, ಮುಂತಾದವರ ಸಾರ್ವಜನಿಕ ಸೇವೆಗಳನ್ನು ಸ್ಮರಿಸುತ್ತೇನೆ.
  ನಮ್ಮ ತಾಲೂಕಿನ ಪ್ರತಿಭಾವಂತರಾಗಿ ಕೋರ್ಟಿನ ನ್ಯಾಯಾಧೀಶರಾಗಿ ಈಗ ಹೈಕೋರ್ಟಿನ ವಕೀಲರಾಗಿರುವ ಎ. ಕೆ. ಭಟ್ಟ ತೇಲಂಗಾರ, ನ್ಯಾಯಾದೀಶರಾಗಿರುವ ಮಂಜುನಾಥ ಎನ್‌. ಭಟ್ಟ ಕೊಡ್ಲಗದ್ದೆ, ಡಿ.ಐ.ಜಿ. ಯಾಗಿ ಗುಜರಾತದಲ್ಲಿರುವ ನರಸಿಂಹ ಎನ್. ಕೋಮಾರ ಬೀಗಾರ ಇವರು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದವರು. ರಾಮಕೃಷ್ಣ ಮುದ್ದೆಪಾಲ ಐ.ಎ.ಎಸ್. ಮಾಡಿ ಈಗ ಅಧಿಕಾರಿಗಳು, ಸಂತೋಷ ಭಟ್ಟ ಬಾಳೆಕಲ್ ನ್ಯಾಯಾಧೀಶರು ಮುಂತಾದವರು ಯಲ್ಲಾಪುರ ತಾಲೂಕಿನ ಸಂಜಾತರು.

ಕೊನೆಯ ಮಾತು

ಯಲ್ಲಾಪುರ ನಗರದ ಮಧ್ಯದಲ್ಲಿಯೇ ನ್ಯಾಷನಲ್ ಹೆದ್ದಾರಿ ಹೋಗಿದೆ. ಇದು ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ಬೈಪಾಸ್‌ ಹೆದ್ದಾರಿಯ ಅವಶ್ಯಕತೆ ತುಂಬಾ ಇದೆ. ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಆಗಲೇಬೇಕೆಂಬ ಹೋರಾಟ ನಡೆಯುತ್ತಿದೆ. ಈ ಎರಡು ಕಾರ್ಯಗಳು ಅತೀ ಶೀಘ್ರದಲ್ಲಿ ನೆರವೇರಬೇಕೆಂದು ಬಯಸುತ್ತೇನೆ. ಯಲ್ಲಾಪುರದ ಬಹಳ ಸ್ಥಳಗಳು ಪ್ರವಾಸಿ ಕೇಂದ್ರವಾಗಲು ಅತ್ಯುತ್ತಮವಾಗಿದೆ. ಪ್ರವಾಸಿ ತಾಣಗಳನ್ನು ಹೇಗೆ ಅಭಿವೃದ್ಧಿ ಪಡಿಸಬಹುದೆಂದು ಕೇರಳವನ್ನು ನೋಡಿ ಕಲಿಯಬಹುದು. ಕೇರಳಿಗರಿಗೆ ಒಂದು ಕೆರೆ ಇದ್ದರೆ ಸಾಕು ಅಲ್ಲಿ ಡೋಣಿ ವಿಹಾರವನ್ನು ಮಾಡಿರುತ್ತಾರೆ, ಕೆರೆಯ ಸುತ್ತ ಆನೆ ಸವಾರಿ, ಕುದುರೆ, ಒಂಟೆ ಸವಾರಿಗಳನ್ನು ಇಟ್ಟಿರುತ್ತಾರೆ. ಉಳಿದುಕೊಳ್ಳಲು ಕಾಟೇಜ್, ಚಿಕ್ಕ ಚಿಕ್ಕ ಹೋಟೆಲ್ಲುಗಳು, ಗುಡಿ ಕೈಗಾರಿಕೆಯ ವಸ್ತುಗಳು ಮಾರಾಟಕ್ಕೆ ಸಿಗುತ್ತವೆ. ಎಲ್ಲದಕ್ಕೂ ಟಿಕೇಟ ಇಟ್ಟಿರುತ್ತಾರೆ. ನಮ್ಮ ಯಲ್ಲಾಪುರದಲ್ಲೂ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸರಕಾರ ಪ್ರವಾಸಿ ತಾಣವನ್ನು ಮಾಡಬೇಕು. ಯಲ್ಲಾಪುರಕ್ಕೆ ಯಾವುದೇ ಕೈಗಾರಿಕೆಗಳು ಫ್ಯಾಕ್ಟರಿಗಳು ಬಂದಿಲ್ಲ. ಇದನ್ನು ಮಾಡುವ ಎಲ್ಲ ಅನುಕೂಲತೆಗಳು ಇಲ್ಲಿವೆ. ಒಂದೆರಡು ಕೈಗಾರಿಕೆ ಫ್ಯಾಕ್ಟರಿಗಳು ಬರಲಿ ಎಂಬ ಹಾರೈಕೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ಹೊಲಿಸಿದರೆ ನಮ್ಮಲ್ಲಿ ಇಂಜನಿಯರಿಂಗ್, ಮೆಡಿಕಲ್‌ ಕಾಲೇಜುಗಳಿಲ್ಲ. ಉದಯವಾಣಿ ತರಂಗ ಗಳಂತಹ ಪತ್ರಿಕೆಗಳಿಲ್ಲ. ಒಂದಾದರೂ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಯಲ್ಲಾಪುರಕ್ಕೆ ಬರಲಿ ಎಂಬ ಆಶಯ, ಉದಯವಾಣಿ, ವಿಜಯವಾಣಿಗಳಂತಹ ಪತ್ರಿಕೆಗಳು ಹೊರ ಹೊಮ್ಮಲಿ, ಕೋಗಿಲೆಯಾಗಿ ಮುಟ್ಟುವುದು ನಂದನದೊಳ ಬನವಾಸಿ ದೇಶದೊಳ್ ಎಂದು ಅಂದು ಪಂಪನು ಹೇಳಿದರೂ ಇಂದು ಎಲ್ಲರೂ ತಿರುವು ಮುರುವಾಗಿದೆ. ತುಂಬಿದ್ದ ಅರಣ್ಯ ಸಂಪತ್ತು ಅರ್ಧದಷ್ಟು ನಶಿಸಿದೆ. ಮಳೆ ಅಂದಿನ ರೀತಿಯಲ್ಲಿ ಸುರಿಯುತ್ತಿದ್ದ. ಯುವ ಸಂಪತ್ತು ಈ ಪ್ರದೇಶವನ್ನು ಬಿಟ್ಟು ಬೇರೆಡೆ ವಲಸೆ ಹೋಗಿರುವುದರಿಂದ ಗ್ರಾಮೀಣ ಭಾಗದ ಅವಸಾನವೋ ಅಥವಾ ಈಗಿರುವ ಆಸ್ತಿಗಳ ಯಜಮಾನಿಕೆ ಇವರಿಂದ ಹಸ್ತಾಂತರವಾಗಿ ಬೇರೆಯವರು ಬಂದು ಮುಂದುವರಿಸಿಕೊಂಡು ಹೋಗುತ್ತಾರೆಯೋ ತಿಳಿಯದು?
  ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ಸರ್ಕಾರ ಮತ್ತು ಅಲ್ಲಿನ ಪಕ್ಷಗಳು ಸಂಘಟನೆಗಳಿಗೆ ಉತ್ತರವಾಗಿ ನಮ್ಮ ಸರ್ಕಾರಗಳು ಮತ್ತು ಎಲ್ಲ ಪಕ್ಷಗಳು, ಕನ್ನಡ ಪರ ಸಂಘಟನೆಗಳು ಮಹಾಜನ ವರದಿಯೇ ಅಂತಿಮವೆಂದು ಸಾರುತ್ತಲೇ ಬಂದಿವೆ ಹಾಗೂ ಈಗಿರುವ ಕರ್ನಾಟಕದ ಗಡಿರೇಖೆಯ ಒಳಗೆ ಇರುವ ಒಂದು ಮೀಟರ ಸ್ಥಳವನ್ನೂ ಬಿಟ್ಟು ಕೊಡಲು ಸಾಧ್ಯವಿಲ್ಲವೆಂತ ಖಡಾಖಂಡಿತವಾಗಿ ಹೇಳುತ್ತಿವೆ. ಇದಕ್ಕೆ ಬೆಂಬಲವನ್ನು ಈ ಸಮ್ಮೇಳನದ ಮೂಲಕ ಹೇಳಲು ಬಯಸುತ್ತೇನೆ.
   ಸರ್ಕಾರದದಿಂದ ಸಿಗುವ ಆರ್ಥಿಕ ಮತ್ತು ಇನ್ನಿತರ ಸಹಾಯ ಸಹಕಾರಗಳು ಯಾರು ಬಡತನದ ರೇಖೆಗಿಂತ ಕೆಳಗಿದ್ದಾರೋ ಅವರಿಗೆ ದುರ್ಬಲರಿಗೆ ಸಿಗುವಂತಾಗಬೇಕು. ಜನರ ಆರ್ಥಿಕ ಸ್ಥಿತಿಯೇ ಮಾನದಂಡವಾಗ ಬೇಕೆ ವಿನಃ ಜಾತಿ ಅಲ್ಪ ಸಂಖ್ಯಾತರು, ಆ ವರ್ಗ ಈ ವರ್ಗ ಧರ್ಮಗಳೆಲ್ಲ ಬರಕೂಡದು. ಯಾರೇ ಬಡವರಿದ್ದರೂ ಅವರಿಗೆ ಸರ್ಕಾರದಿಂದ ಸಹಾಯ ಸಿಗಲಿ. ಅಂತಾದರೆ ರಾಜ್ಯ ದೇಶ ಅಭಿವೃದ್ಧಿಯತ್ತ ಸಾಗಲು ಅನುಕೂಲ.
    ರಾಜಕೀಯದಲ್ಲಿರುವಂತೆ ಇತ್ತಿಚಿಗೆ ಸಾಹಿತ್ಯ ಸಮ್ಮೇಳನಕ್ಕೂ ಪಕ್ಷ ಪಂಗಡ ಗುಂಪುಗಾರಿಕೆ ಬರೆದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಸಕ್ಷ ಪಂಗಡಗಳ ಹೊರತಾಗಿ ಸೌಹಾರ್ದಯುತ ವಾತಾವರಣಗಳೊಂದಿಗೆ ಎಲ್ಲರೂ ಒಟ್ಟಾಗಿ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಲು ಅನುವಾಬೇಕೆಂದು ಆಶಿಸುತ್ತೇನೆ.
   ಆನಗೋಡಿನಂತಹ ಉತ್ತಮ ಪರಿಸರವುಳ್ಳ ಗ್ರಾಮೀಣ ಭಾಗದಲ್ಲಿ ವದನೇ ಸಹಿತ್ಯ ಸಮ್ಮೇಳನ ನಡೆಸಿರುವುದು ಬಹುದೊಡ್ಡ ಸಾಧನೆ, ರಾಜ್ಯದಲ್ಲಿ ೮೬ ನೇ ಸಾಹಿತ್ಯ ಸಮ್ಮೇಳನವಾಗಿವೆ. ಜಿಲ್ಲೆಯಲ್ಲಿ ೨೨ ಸಾಹಿತ್ಯ ಸಮ್ಮೇಳನವಾಗಿವೆ. ಯಲ್ಲಾಪುರ ತಾಲೂಕಿನಲ್ಲಿ ೫ ನೇ ಸಾಹಿತ್ಯ ಸಮ್ಮೇಳನ. ಆದರೆ ಹಳ್ಳಿಯಾಗಿರುವ ಆನಗೋಡಿನಲ್ಲಿ ಇದು ಪಥಮ ಸಾಹಿತ್ಯ ಸಮ್ಮೇಳನ, ಯಲ್ಲಾಪುರ ತಾಲೂಕಿನಲ್ಲಿ ಆನಗೋಡ ಐತಿಹಾಸಿಕವಾಗಿ ದಾಖಲಾಗಿರುತ್ತದೆ. ಬೇರೆ ಯಾವುದೇ ಹಳ್ಳಿಗಳಿಗೆ ಸಿಗದಿರುವ ಭಾಗ್ಯ ನಮ್ಮ ಆನಗೋಡಿಗೆ ಸಿಕ್ಕಿದೆ. ಆನಗೋಡಿನ ಎಲ್ಲ ಸಾಮಾಜಿಕ ಕಾರ್ಯಕರ್ತರು, ನಾಗರೀಕರು ಕನ್ನಡದ ಪ್ರೇಮಿಗಳು ಸಂಪೂರ್ಣ ಸಹಕಾರ ನೀಡಿರುವುದಕ್ಕೆ ಮನಸ್ಸು ತುಂಬಿ ಕೃತಜ್ಞತೆಗಳು, ಹಳ್ಳಿಯಲ್ಲಿಯೇ ಸಮ್ಮೇಳನವಾಗಬೇಕೆಂದು ನಿರ್ಧರಿಸಿ ಯಶಸ್ವಿಗೊಳಿಸಿರುವ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ. ಎನ್. ವಾಸರೆಯವರಿಗೆ. ತಾಲೂಕಾ ಅಧ್ಯಕ್ಷರಾದ ವಿದ್ವಾನ್ ಸುಬ್ರಹ್ಮಣ್ಯ ಭಟ್ಟರಿಗೆ ಮತ್ತು ಕಾರ್ಯಕಾರಿ ಸಮಿತಿಯವರಿಗೆ, ಸಂಘಟಕರಿಗೆ ಮತ್ತು ಉಮಾಮಹೇಶ್ವರ ಭಾಗ್ವತ ಕಳಚೆ ಇವರಿಗೆ ಮತ್ತು ಕನ್ನಡದ ಎಲ್ಲ ಸರಕಾರಿ ನೌಕರರಿಗೆ, ಹೃದಯವಂತರಿಗೆ ಧನ್ಯವಾದಗಳು, ಸಮ್ಮೇಳನದ ವಿಷಯಗಳು ಜನರಿಗೆ ತಲುಪಲು ಪತ್ರಿಕಾ ಮಾಧ್ಯಮದವರು ಬೆನ್ನಲುಬಾಗಿ ಇರುತ್ತಾರೆ. ಈ ಸಮ್ಮೇಳನದ ಸಿದ್ಧತೆಗಳು ಪ್ರಾರಂಭವಾದಾಗಿನಿಂದಲೂ, ವರದಿ ಮಾಡುತ್ತಿರುವ ಪತ್ರಿಕಾ ವರದಿಗಾರರಿಗೂ, ಟಿ. ವಿ. ಹೃದಯ ತುಂಬಿ ಕೃತಜ್ಞತೆಗಳು,

ಜೈಹಿಂದ - ಜೈ ಕರ್ನಾಟಕ - ಜೈ ಕನ್ನಡ

‌‌