ಯಲ್ಲಾಪುರ : ಯಾವುದೇ ವ್ಯಕ್ತಿಗೆ ಸಂಪತ್ತಿಗಿಂತ ಉತ್ತಮ ಆರೋಗ್ಯವೇ ಬಹು ದೊಡ್ಡ ಆಸ್ತಿ. ಜೀವನದಲ್ಲಿ ಪರಿಪೂರ್ಣ ಆರೋಗ್ಯ ಗಳಿಸಿ, ಉಳಿಸಿಕೊಳ್ಳುವುದು ಅತಿ ಮಹತ್ವವಾದುದು, ಇಂತಹ ಶಿಬಿರಗಳ ಮೂಲಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಅಕ್ಟೋಬರ್.15 ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ ಹಾಗೂ ತಾಲೂಕಾ ಆಸ್ಪತ್ರೆಗಳ ಸಹಯೋಗದಲ್ಲಿ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರೋಗಕ್ಕೆ ಚಿಕಿತ್ಸೆ ಒಂದು ವಿಧಾನವಾಗಿರುವಂತೆ, ರೋಗವೇ ಬಾರದಂತೆ ತಡೆಯುವುದು ಇನ್ನೊಂದು ಕ್ರಮವಾಗಿದೆ. ಎಲ್ಲರೂ ರೋಗ ಬಾರದಂತೆ ಮುಂಜಾಗ್ರತೆ ವಹಿಸಿದರೆ ಆರೋಗ್ಯವಂತರಾಗಿ ಬದುಕಬಹುದು ಎಂದರು.
ಸಿದ್ದಾಪುರ ಧನ್ವಂತರಿ, ಆರ್ಯುವೇದ ಕಾಲೇಜು ಪ್ರಾಚಾರ್ಯೆ ಡಾ.ರೂಪಾ ಭಟ್ಟ ಮಾತನಾಡಿ, ಊಟ ಮಾಡುವುದು ಜೀವನಕ್ಕಾಗಿ, ನಾವೇನನ್ನಾದರೂ ಗಳಿಸಿದರೆ ಉತ್ತಮ ಆರೋಗ್ಯ ಸಿದ್ದಿಸಬೇಕು. ಆಯುರ್ವೇದ ಜೀವನ ಚಿಕಿತ್ಸಾ ಪದ್ದತಿ. ರೋಗ ಬಾರದಂತೆ ನೋಡಿಕೊಳ್ಳುವ ರೂಢಿ ಅಳವಡಿಸಿಕೊಳ್ಳಬೇಕು. ನಮ್ಮ ದೈನಂದಿನ ಜೀವನ ಪದ್ದತಿಯನ್ನು ಹಿಂದಿನವರಂತೆ ಬದಲಾಯಿಸಿಕೊಳ್ಳಬೇಕಾಗಿದೆ. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ವಿದೇಶಿಯರು ಆಯುರ್ವೇದದ ಮೊರೆ ಹೋಗುತ್ತಿದ್ದಾರೆ, ಆದರೆ ನಮ್ಮವರು ಆಯುರ್ವೇದದಿಂದ ದೂರವಾಗುತ್ತಿದ್ದಾರೆ. ಆಯುರ್ವೇದದಲ್ಲಿ ದುಷ್ಪರಿಣಾಮವಿಲ್ಲ ಎಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾತನಾಡಿ, ಆಯುರ್ವೇದದಲ್ಲಿ ಅನೇಕ ರೀತಿಯ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿದರು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಕೆ.ಜೆ.ಯು ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಮತ್ತಿತರರು ಉಪಸ್ಥಿತರಿದ್ದರು.
ಧನ್ವಂತರಿ ಕಾಲೇಜಿನ ವೈದ್ಯರಾದ ಡಾ.ರೂಪಾ ಭಟ್ಟ, ಡಾ.ಮಧುಕೇಶ್ವರ ಹೆಗಡೆ, ಡಾ. ಚೈತ್ರಿಕಾ ಹೊಸೂರು, ಯಲ್ಲಾಪುರದ ಆಯುಶ್ ವೈದ್ಯರಾದ ಡಾ. ಕೇಶವ್‍ರಾಜ್ ವಿ.ವಿ., ಆಶಾ ಪಾಟೀಲ್ 84 ಕ್ಕೂ ಹೆಚ್ಚು ಜನರಿಗೆ ತಪಾಸಣೆ, ಚಿಕಿತ್ಸೆ ನೀಡಿದರು.
ತಾಲೂಕಾ ಆಸ್ಪತ್ರೆಯ ವೈದ್ಯರಾದ ಡಾ. ಸೌಮ್ಯ ಕೆ.ವಿ ಸ್ವಾಗತಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು.