ಯಲ್ಲಾಪುರ : ಬೇರೆ ಬೇರೆ ತಾಲೂಕುಗಳಲ್ಲಿ ಪ್ರತ್ಯೇಕವಾದ ಸಮಸ್ಯೆಗಳಿರುತ್ತವೆ. ಅಧಿಕಾರಿಗಳಾದ ನಾವು ಜವಾಬ್ದಾರಿಯುತವಾಗಿ ನಿರ್ವಹಿಸಿ, ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಉತ್ತಮ ಹೆಸರು ಬರುವಂತೆ ನೋಡಿಕೊಳ್ಳಬೇಕೆಂದು ಶಿರಸಿಯ ಸಹಾಯಕ ಆಯುಕ್ತ ದೇವರಾಜ್ ಆರ್. ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಸರ್ಕಾರದ ನಿರ್ದೇಶನದಂತೆ ಕೊವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ತಾಲೂಕಾ ಆಡಳಿತ ಹಾಗೂ ಜಿಲ್ಲಾಡಳಿತ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‍ನ್ನು ಸಮರ್ಥವಾಗಿ ಎದುರಿಸಿದೆ. ಎಲ್ಲ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸಿ ಜಿಲ್ಲಾಡಳಿತಕ್ಕೆ ಉತ್ತಮ ಹೆಸರು ತರಬೇಕೆಂದರು.
ಪಟ್ಟಣ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆಯಿದ್ದರೂ ಜೋಡುಕೆರೆ ಬಳಿ ರಸ್ತೆಯಂಚಿಗೆ ಅನೇಕ ತಿಂಗಳುಗಳಿಂದ ಮೀನು ಮಾರಾಟ ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರವಿವಾರದ ಸಂತೆ ದಿನ ಸಂತೆ ಮಾರುಕ್ಠರಯಲ್ಲಿ ಒಣಮೀನು ಮಾರುತ್ತಾರೆ. ಇಲ್ಲಿಯೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕೆಂದು ಮಾಧ್ಯಮ ಪ್ರತಿನಿಧಿಗಳು ಸಹಾಯಕ ಆಯುಕ್ತ ಗಮನಸೆಳೆದರು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಪ.ಪಂ ಅಧಿಕಾರಿಗಳಿಗೆ ಎಸಿ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ತಾಲೂಕಿನಲ್ಲಿ 19 ಶಾಲೆಗಳು ಅಪಾಯ ಸ್ಥಿತಯಲ್ಲಿವೆ. ಈ ಕುರಿತು ಇಲಾಖಾ ಮೇಲಧಿಕಾರಿಗಳಿಗೆ ಮತ್ತು ಶಾಸಕರು, ಸಚಿವರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಸೇರಿದಂತೆ ಎಲ್ಲ ಶೈಕ್ಷಣಿಕ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ ಎಂದರು.
ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ತಾಲೂಕಿನ ಸಮಗ್ರ ಮಾಹಿತಿಯನ್ನು ಆಯುಕ್ತರಿಗೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ, ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರ ವಿ.ಎಂ.ಭಟ್ಟ, ಜಿ.ಪಂ ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರ ಅಶೋಕ ಬಂಟ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಸಿಡಿಪಿಓ ರಫೀಕಾ ಹಳ್ಳೂರು, ಅಬಕಾರಿ ಸಹಾಯಕ ಆಯುಕ್ತ ಪ್ರಶಾಂತ ಪಾಟೀಲ, ಪೊಲೀಸ್, ಅರಣ್ಯ, ಕೃಷಿ, ತೊಟಗಾರಿಕಾ, ಪ.ಪಂ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಆಯುಕ್ತರಿಗೆ ಮಾಹಿತಿ ನೀಡಿದರು.