ಸಂತ ಶ್ರೀ ಸೇವಾಲಾಲ ಜಯಂತೋತ್ಸವ
ಯಲ್ಲಾಪುರ ; ಕರ್ನಾಟಕದ ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೋಪ್ಪ(ಭಾಯಗಡ್, ಸೂರ ಖಂಡ್) ಎಂಬಲ್ಲಿ ಸೇವಾಭಾಯ, ಸೇವಲಾಲ್ ಎಂಬ ನಾಮದೊಂದಿಗೆ ಬಂಜಾರರ ಅಜ್ಞಾನ ದೂರ ಮಾಡಲು 15 ಫೆಬ್ರವರಿ1739 ರಲ್ಲಿ ಭೀಮ ನಾಯ್ಕ ಹಾಗೂ ಧರ್ಮಿಣಿ ಮಾತೆಯವರಿಗೆ ದೈವಿ ಪುರುಷನ ಜನನವಾಯಿತು.
ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು. ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನದಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದರು. ಇವರಿಗೆ ಶ್ರೀ ಸೇವಾಲಾಲ್ ಮಹಾರಾಜರ ಜನನ ಅಜ್ಞಾನದಿಂದ ಹಾಗೂ ಅರಣ್ಯವಾಸದಿಂದ ಮುಕ್ತಿಯ ಮೇಟ್ಟಿಲಾಯಿತು.
ಬಂಜಾರರು ಈ ದೈವ ಪುರುಷನನ್ನು “ಮೋತಿವಾಳೋ” “ಲಾಲ್ ಮೋತಿ” ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ “ಸ್ಮಿತ್ ಭಾವುಚಾ” ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು. ಅದರ ಪ್ರತಿಯಾಗಿ ಪೋರ್ಚುಗೀಸರು ಇವರಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಅವರನ್ನು ಮೋತಿವಾಳೋ ಎಂದು ಅಭಿಮಾನದಿಂದ ಕರೆಯಲಾಗುತ್ತಿತ್ತು.
ಬುದ್ಧ, ಬಸವ, ಕಬೀರ, ಗುರು ನಾನಕ್ , ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ದನಗಾಹಿ ಗೋಪಾಲಕನಾಗಿದ್ದ ಸೇವಾಲಾಲ್ ತಮ್ಮ ಜೀವನಾನುಭವದ ಮೂಲಕ ಗೌರವಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು. ಒಂದು ಸಹೋದರತ್ವದ, ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು.
ಇಂತ ಮಾನವತಾವಾದಿಯ ಜನನದ ಮತ್ತು ಜೀವನ ಮೌಲ್ಯಗಳು ಇಂದು ಲಂಬಾಣಿ ತಾಂಡಗಳಲ್ಲಿ ಜನ ಜನಿತವಾಗಿವೆ. ಹಲವಾರು ಅಜ್ಞಾನಗಳು, ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್ ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ.
ತಹಶೀಲ್ದಾರ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ ಜಯಂತೋತ್ಸವ
ಯಲ್ಲಾಪುರ : ಬಸವಣ್ಣ, ಶಿಶುನಾಳ ಶರೀಫ, ಕನಕದಾಸರಂತೆ ಸಂತ ಸೇವಾಲಾಲ್ ಮಾನವ ಜನಾಂಗಕ್ಕೆ ಅತ್ಯುತ್ತಮವಾದ ತತ್ವಸಿದ್ಧಾಂತಗಳನ್ನು ನೀಡಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ಆದರ್ಶಯುತ ಬದುಕು ಸಾಗಿಸಲು ಸಾಧ್ಯ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಹೇಳಿದರು.
ಅವರು ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಆದರ್ಶವಾದಿ ಸಂತ ಸೇವಾಲಾಲ್ ಅವರ 283 ನೇ ಜಯಂತೋತ್ಸವದ ಅಂಗವಾಗಿ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿ ಮಾತನಾಡಿದರು.
ಸಂತ ಸೇವಾಲಾಲ್ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಗಂಗಾಧರ ಲಮಾಣಿ, ಸಂತ ಸೇವಾಲಾಲರು ಸತ್ಯವನ್ನು ನುಡಿಯಬೇಕು, ದುಶ್ಚಟಗಳಿಂದ ದೂರ ಇರಬೇಕು, ಗೋರಕ್ಷಣೆ ನಮ್ಮ ಆಧ್ಯತೆಯಾಗಿರಬೇಕು. ಹಸಿದ ಬಡವರಿಗೆ ಅನ್ನ ನೀಡಬೇಕು ಎನ್ನುವ ಸಂತ ಸೇವಾಲಾಲರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಸೇವಾಲಾಲ ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದರು.
ಗ್ರೇಡ್ 2 ತಹಶೀಲ್ದಾರ ಸಿ ಜಿ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ವಿವಿಧ ಇಲಾಖೆಯ ಅಧಿಕಾರಿಗಳು, ಯಲ್ಲಾಪುರದ ಬಂಜಾರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶಂಕರ ನಾಯಕ, ಬಂಜಾರ ಸಮಾಜದ ಊರ ನಾಯಕ ಶಿಕ್ಷಕ ಈಶ್ವರ ರಾಥೋಡ್, ಬಂಜಾರಾ ಸಮಾಜದ ಪ್ರಮುಖರಾದ ರಮೇಶ ನಾಯಕ, ದೇವರು ಲಮಾಣಿ ಸೇರಿದಂತೆ ತಾಲೂಕಾ ಕಚೇರಿ ಸಿಬ್ಬಂದಿಗಳು ಇದ್ದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರಿಂದ ಸಂತ ಸೇವಾಲಾಲ್ ಜಯಂತೋತ್ಸವದ ಶುಭಾಶಯ
ಯಲ್ಲಾಪುರ : ಆಧ್ಯಾತ್ಮದ ಮೂಲಕವಾಗಿ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದವರು. ತಮ್ಮ ಬಂಜಾರ ಸಮುದಾಯದಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿ ಸಮಾಜ ಪರಿವರ್ತನಾ ಯೋಗಿಯಾಗಿದ್ದ ಸಂತ ಸೇವಾಲಾಲರು, ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದು ಕಾರ್ಮಿಕ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ ಹಾಗೂ ನಾಡಿನ ಸಮಸ್ತ ಬಂಜಾರಾ ಸಮಾಜದವರಿಗೆ ಸಂತ ಸೇವಾಲಾಲ್ ಮಹಾರಾಜರ 283 ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.